ನೂತನ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಪೂರ್ಣ ರೀತಿಯಲ್ಲಿ ಆಡಳಿತ ನಡೆಸಲಿದೆ.
ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಅಧಿವೇಶನ ಇಂದು ಬೆಳಿಗ್ಗೆ ಪ್ರಾರಂಭಗೊಳ್ಳಲಿದ್ದು, ಹಂಗಾಮಿ ಸಭಾಧ್ಯಕ್ಷರಾಗಿ ಆಯ್ಕೆಯಾಗಲಿರುವ ಬೋಪಯ್ಯ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಬಳಿಕ ಇಡೀ ದಿನ ಕಲಾಪ ನಡೆಯಲಿದೆ. ಅಲ್ಲದೆ, ನಾಳೆ ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಮೂರನೇ ದಿನದಂದು ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಅದೇ ದಿನದಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಮಧ್ಯೆ, ವಿಧಾನಸಭಾಧ್ಯಕ್ಷ ಪಟ್ಟವನ್ನು ಒಪ್ಪಿಕೊಂಡಿರುವ ಹಿರಿಯ ಶಾಸಕ ಜಗದೀಶ್ ಶೆಟ್ಟರ್ ಇಂದು ಸ್ಪೀಕರ್ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಶೆಟ್ಟರ್ ತಮಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದು ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆದವು. ಕೊನೆಗೆ ರಾಷ್ಟ್ತ್ರೀಯ ನಾಯಕರ ಮಧ್ಯೆ ಪ್ರವೇಶದಿಂದ ಶೆಟ್ಟರ್ ಸ್ಪೀಕರ್ ಹುದ್ದೆ ವಹಿಸಿಕೊಳ್ಳಲು ಒಪ್ಪಿದರು.
|