ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯಿಂದಾಗಿ ತತ್ತರಿಸಿರುವ ರಾಜ್ಯದ ಜನರಿಗೆ ಹೆಚ್ಚಿನ ಹೊರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ತೈಲ ಬೆಲೆ ಏರಿದ ಬೆನ್ನಲ್ಲೆ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಯಾಗುವುದು ಎಂಬ ಆತಂಕ ಜನರಿಗೆ ಬೇಡ. ಪ್ರಯಾಣ ದರ ಏರಿಕೆ ಕುರಿತು ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ತುರ್ತು ಸಂಪುಟ ಸಭೆ ಕರೆಯಲಾಗಿದ್ದು, ಸುದೀರ್ಘ ಚರ್ಚೆ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಮಧ್ಯೆ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸೇವಾ ಮತ್ತು ಮಾರಾಟ ತೆರಿಗೆಯನ್ನು ಕಡಿತ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ದೇಶದಲ್ಲಿಯೇ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ವಿವಿಧ ತೆರಿಗೆಗಳನ್ನು ಕಡಿತ ಮಾಡುವ ಮೂಲಕ ತೈಲ ಬೆಲೆಗಳು ಹೊರೆಯಾಗದಂತೆ ನೋಡಿಕೊಳ್ಳುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
|