ಬೆಂಗಳೂರು: ಶಿಕಾರಿಪುರದಲ್ಲಿ ಜಿದ್ದಾಜಿದ್ದಿನ ಹೋರಾಟ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ಇಂದು ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಇಂದು ಬೆಳಿಗ್ಗೆ ಬಂಗಾರಪ್ಪ ನಿವಾಸಕ್ಕೆ ತೆರಳಿದ ಯಡಿಯೂರಪ್ಪ ಬೆಳಗಿನ ಉಪಹಾರವನ್ನು ತಮ್ಮ ಮಾಜಿ ಸ್ಪರ್ಧಿ ಜತೆಯಲ್ಲಿಯೇ ಸೇವಿಸಿದ್ದು ವಿಶೇಷವಾಗಿತ್ತು. ಸುಮಾರು ಹದಿನೈದು ನಿಮಿಷಗಳ ಕಾಲ ರಾಜ್ಯ ಹಾಗೂ ದೇಶದ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಂಗಾರಪ್ಪ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಅನಿವಾರ್ಯವಾಗಿದೆ. ಎನ್‌ಡಿಎ ಸರ್ಕಾರವಿದ್ದರೂ ಏನೂ ಮಾಡಲಾಗುತ್ತಿಲ್ಲ. ಜನ ಸಾಮಾನ್ಯರು ಬೆಲೆ ಹೆಚ್ಚಾಗಿರುವುದಕ್ಕೆ ಆಕ್ರೋಶಗೊಂಡಿದ್ದಾರೆ. ಇದನ್ನು ನಿಭಾಯಿಸಲು ಪಶ್ಚಿಮ ಬಂಗಾಳ, ಕೇರಳದಂತೆ ಮಾರಾಟ ತೆರಿಗೆ ಕಡಿಮೆ ಮಾಡುವಂತೆ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಈ ಬಗ್ಗೆ ಶೀಘ್ರವೇ ಸಂಪುಟ ಸಭೆ ಕರೆದು ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪ್ಪ ಅವರ ಜೊತೆಗಿನ ಮಾತುಕತೆ ಸೌಹಾರ್ದಯುತವಾಗಿತ್ತು. ರಾಜ್ಯದ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನೀಡುವಂತೆ ಅವರಲ್ಲಿ ಕೋರಿದ್ದೇನೆ ಎಂದು ತಿಳಿಸಿದರು.
|