ಮುಖ್ಯಮಂತ್ರಿ ಗಾದಿಯನ್ನು ಗಟ್ಟಿ ಮಾಡಿಕೊಳ್ಳುವ ಈ ಹಿಂದಿನ ಪ್ರಯತ್ನವನ್ನು ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ತಡೆದ ಆರು ತಿಂಗಳ ತರುವಾಯ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮೊದಲ ಬಾರಿ ವಿಶ್ವಾಸ ಮತ ಯಾಚಿಸಲಿದ್ದಾರೆ.
ಐವರು ಸ್ವತಂತ್ರ ಶಾಸಕರು ಸಚಿವ ಪದವಿ ಪಡೆದು ಮತ್ತು ಒಬ್ಬರು ಬೇಷರತ್ತಾಗಿ ಬಿಜೆಪಿಯನ್ನು ಬೆಂಬಲಿಸುತ್ತಿರುವುದರಿಂದ ಮತ್ತು ಬಿಜೆಪಿಗೆ ತನ್ನದೇ ಆದ 110 ಸ್ಥಾನಗಳಿರುವುದರಿಂದ ಈ ಬಾರಿಯ ವಿಶ್ವಾಸಮತ ಯಾಚನೆ ಯಡಿಯೂರಪ್ಪ ಅವರಿಗೆ ಸುಲಲಿತವಾಗಲಿದೆ. ಬಿಜೆಪಿಗೆ ಬಹುಮತ ಸಾಬೀತುಪಡಿಸಲು 113 ಸ್ಥಾನಗಳ ಅವಶ್ಯಕತೆಯಿದ್ದು, ಅದು ಈಗ 116 ಸ್ಥಾನಗಳ ಬೆಂಬಲವನ್ನು ಹೊಂದಿದೆ.
ರಾಜ್ಯದಲ್ಲಿ ಪ್ರಮುಖವಾಗಿರುವ ಲಿಂಗಾಯತ ಸಮುದಾಯದವರಾಗಿರುವ 66ರ ಹರೆಯದ ಯಡಿಯೂರಪ್ಪ, ರಾಜ್ಯಪಾಲರ ಸೂಚನೆಯ ಮೇರೆಗೆ ಬಲಾಬಲ ಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದಾರೆ.
ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಈ ಸೂಚನೆಗೆ ಆರಂಭದಲ್ಲಿ ಬಿಜೆಪಿ ತೀವ್ರವಾಗಿ ಆಕ್ಷೇಪಿಸಿದ್ದರೂ, ಸದನದಲ್ಲಿ ಬಹುಮತ ಸಾಬೀತುಪಡಿಸುವುದು ಖಚಿತವಾಗಿರುವ ಕಾರಣ ಅದನ್ನು ಒಪ್ಪಿದೆ. ಸದನದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್-ಬಿಜೆಪಿಯ ಜಂಟಿ ಬಲ 108 ಮಾತ್ರ ಇದೆ.
ಇದಕ್ಕೂ ಮುನ್ನ ರಾಜ್ಯಪಾಲರು ರಾಮೇಶ್ವರ್ ಠಾಕೂರ್ ಜಂಟಿ ಅಧಿವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನೂತನ ಸರ್ಕಾರದ ಗೊತ್ತುಗುರಿಗಳ ಕುರಿತು ಅವರು ಭಾಷಣದಲ್ಲಿ ತಿಳಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ವಿಶ್ವಾಸಮತವನ್ನು ಬೆಂಬಲಿಸುವಂತೆ ಅಲ್ಲಿನ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲಿದೆ ಎಂದು ತಿಳಿದು ಬಂದಿದೆ. ವಿಶ್ವಾಸ ಮತಯಾಚನೆ ಬಳಿಕ ಯಡಿಯೂರಪ್ಪ ತಮ್ಮ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ.
|