ಹಣಬಲದಿಂದ ಅಧಿಕಾರಕ್ಕೆ ಬಂದ ಸರ್ಕಾರ ಅದೇ ಹಣಬಲದಿಂದಲೇ ಅಧಿಕಾರ ಕಳೆದುಕೊಳ್ಳಲಿದೆ. ಹಣ ಬಲವೇ ಕುರ್ಚಿಯನ್ನು ಅಕ್ರಮಿಸಿಕೊಳ್ಳಲಿದೆ ಎಂದು ವಿಧಾನಸಭೆಯ ಪ್ರತಿ ಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಇದು ನೈಜ ಬಲದಿಂದ ಅಸ್ತಿತ್ವಕ್ಕೆ ಬಂದ ಸರ್ಕಾರವಲ್ಲ. ಗಣಿಧಣಿಗಳ ಹಣಬಲದಿಂದ ಅಧಿಕಾರಕ್ಕೆ ಬಂದಿದೆ. ಆ ಗಣಿ ಧಣಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಖರ್ಗೆ ಬಿಜೆಪಿಗೆ ಸೂಚನೆ ನೀಡಿದರು. ರಾಜಕೀಯ ಮತ್ತು ಹಣ ಬಲ ಜೊತೆಗೆ ಸಾಗಿದರೆ ರಾಜ್ಯದ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಮುಂದೆ ಮಾತನಾಡಿದ ಅವರು, ಪಕ್ಷೇತರರ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ ಅವರಿಗೆ ಸಚಿವ ಸ್ಥಾನ ನೀಡಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಆದರೆ ಖಾತೆ ಹಂಚಿಕೆಯಾದ ಮೇಲೆ ಎಷ್ಟು ಪಕ್ಷೇತರರು ಮುನಿಸಿಕೊಂಡು ಹೊರ ನಡೆಯುತ್ತಾರೆ ಎಂಬುದನ್ನು ನೋಡಬೇಕು. ಇದು ಕೂಡಾ ಸ್ಥಿರ ಸರ್ಕಾರವಲ್ಲ ಎಂದು ಲೇವಡಿ ಮಾಡಿದ ಖರ್ಗೆ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ರೈತರಿಗೆ ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ಆರೋಪಿಸಿದರು.
|