ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸಗೊಬ್ಬರ ಸಮಸ್ಯೆಯನ್ನು ತಕ್ಷಣ ಇತ್ಯರ್ಥ ಮಾಡಬೇಕೆಂಬ ಬಗ್ಗೆ ಅರಿವಿದೆ. ಆದರೆ ಸರಕಾರ ಅಧಿಕಾರಕ್ಕೆ ಬಂದು ಕೆಲವೇ ದಿನ ಆಗಿರುವುದರಿಂದ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಸಮಸ್ಯೆ ಬಗೆಹರಿಸುವ ಸಂಬಂಧ ಅಗತ್ಯವಿದ್ದರೆ ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು ಎಂದು ತಿಳಿಸಿದ ಅವರು, ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಶಾಂತ ರೀತಿಯಿಂದ ವರ್ತಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.
ಈ ಮಧ್ಯೆ ತೈಲ ಬೆಲೆ ಏರಿಕೆ ಕುರಿತು ಕೇಂದ್ರ ಸರಕಾರಎಲ್ಲಾ ಹಣಕಾಸು ಸಚಿವರ ಸಭೆ ಕರೆದಿದ್ದು, ಸಭೆಗೆ ತಾವು ಭಾಗವಹಿಸುವುದಾಗಿ ಯಡಿಯೂರಪ್ಪನವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯದ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
|