ನಕಲಿ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನಗರದ ಎರಡು ಕಾಲೇಜಿನ 10 ವಿದ್ಯಾರ್ಥಿಗಳಿಗೆ ಜೂ. 9 ರಂದು ನಡೆಯುವ ಮ್ಯಾನೆಜ್‌ಮೆಂಟ್ ಪರೀಕ್ಷೆ ಬರೆಯದಂತೆ ಬೆಂಗಳೂರು ವಿಶ್ವವಿದ್ಯಾನಿಲಯ ನಿಷೇಧಿಸಿದೆ. ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವಿ ಕುಲಪತಿ ಎಚ್.ಎ. ರಂಗನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿದ್ಯಾರ್ಥಿಗಳು ನಕಲಿ ಪ್ರಮಾಣ ಪತ್ರ ಸಲ್ಲಿಸಿರುವುದರ ಜೊತೆಗೆ ಇವರಿಗೆ ಪರೀಕ್ಷೆ ಬರೆಯಲು ಬೇಕಾದ ಅರ್ಹ ಶೇಕಡಾವಾರು ಅಂಕಗಳು ಕೂಡಾ ಇಲ್ಲ ಎಂದಿದ್ದಾರೆ. ಇತರ 30 ಮಂದಿ ವಿದ್ಯಾರ್ಥಿಗಳು ಕೂಡಾ ವಿಚಾರಣೆಯಲ್ಲಿದ್ದು, ಆದರೆ ಅವರಿಗೆ ಮಾನವೀಯ ನೆಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಪರೀಕ್ಷೆಗೆ ಮೂರು ದಿನಕ್ಕೆ ಮುನ್ನ ಈ ವಿದ್ಯಾರ್ಥಿಗಳು ಅಗತ್ಯ ಪ್ರಮಾಣ ಪತ್ರಗಳನ್ನು ಕಾಲೇಜಿಗೆ ಸಲ್ಲಿಸಿದ್ದಾರೆ. ಇವರು ನಗರದ ನಾಲ್ಕು ಮ್ಯಾನೆಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ವಿವಿ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವ ಕಾಲೇಜುಗಳ ಬಗ್ಗೆ ಮಾತನಾಡಿದ ಕುಲಪತಿ, ಇಂತಹ ಕಾಲೇಜುಗಳ ವಿರುದ್ಧ ವಿವಿಗೆ ಅಥವಾ ಕುಲಪತಿಯವರಿಗೆ ದೂರು ನೀಡಿದರೆ ಆ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ವಿವಿಯನ್ನು ನ್ಯಾಕ್ ಸಮಿತಿ ಪರೀಶೀಲಿಸಿದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ ಎಂದು ಅವರು ತಿಳಿಸಿದರು.
|