ಜೂನ್ 26ರಂದು ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಸೋಲನ್ನು ಅನುಭವಿಸಿರುವ ಹಿರಿಯ ನಾಯಕ ಎಚ್.ಕೆ. ಪಾಟೀಲ್ ನಿರೀಕ್ಷೆಯಂತೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ.
ಅಲ್ಲದೆ, ಈಶಾನ್ಯ ಪಧವೀಧರ ಕ್ಷೇತ್ರದಿಂದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಅಣ್ಣರಾಯ ಅಜಗೊಂಡ ಚೆನ್ನಪ್ಪ, ಆಗ್ನೇಯ ಪದವೀಧರ ಕ್ಷೇತ್ರದಿಂದ ಲೋಕೇಶ್ವರಪ್ಪ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ರಾಘವೇಂದ್ರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಈ ಮಧ್ಯೆ ರಾಜ್ಯಸಭೆಗೆ ಪ್ರವೇಶಿಸಲು ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ. ವಿಧಾನಸಭೆಯಿಂದ ರಾಜ್ಯಸಭೆಗೆ ಕೇವಲ ನಾಲ್ಕು ಮಂದಿಯನ್ನು ಮಾತ್ರ ಕಳುಹಿಸಲು ಅವಕಾಶ ಇದೆ. ಅಲ್ಲದೆ, ಕಾಂಗ್ರೆಸ್ ಕೇವಲ ಒಬ್ಬರನ್ನು ಅಥವಾ ಇಬ್ಬರನ್ನು ಕಳುಹಿಸುವ ಅವಕಾಶವಿದೆ. ಆದರೂ ರಾಜ್ಯಸಭೆಯಲ್ಲಿ ಪ್ರವೇಶ ಗಿಟ್ಟಿಸಲು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಎಂ.ವಿ. ರಾಜಶೇಖರನ್, ಜನಾರ್ಧನ ಪೂಜಾರಿ ಮತ್ತು ಸಿ.ಕೆ. ಜಾಫರ್ ನಡುವೆ ತೀವ್ರ ಹಣಾಹಣಿ ನಡೆದಿದೆ ಎಂದು ತಿಳಿದು ಬಂದಿದೆ.
|