ಬೆಂಗಳೂರು: ಪಕ್ಷೇತರರ ಬೆಂಬಲದೊಂದಿಗೆ ಸುಭದ್ರ ಸರ್ಕಾರದ ಕನಸಿನಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈಗ ಭಿನ್ನಮತ ತಲೆದೋರಿದೆ.
ಸಚಿವ ಸಂಪುಟದಲ್ಲಿ ಸೂಕ್ತ ಖಾತೆ ದೊರೆಕಿಲ್ಲ ಹಾಗೂ ಜಿಲ್ಲಾ ಉಸ್ತುವಾರಿ ಹೊಣೆ ನೀಡದಿರುವ ಬಗ್ಗೆ ಅಸಮಾಧಾನಗೊಂಡಿರುವ ಪಕ್ಷೇತರ ಸಚಿವರು ಇಂದು ಗುಪ್ತ ಸ್ಥಳಕ್ಕೆ ತೆರಳಿ ಸಮಾಲೋಚನೆ ನಡೆಸಿದರು.
ಅಲ್ಲದೆ, ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನದ ಕುರಿತು ತಿಳಿಸುವುದಾಗಿ ಪಕ್ಷೇತರರು ಮಾದ್ಯಮದವರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷೇತರ ಸಚಿವರಾದ ನರೇಂದ್ರ ಸ್ವಾಮಿ, ಬಿಜೆಪಿ ಸರ್ಕಾರದ ಕುರಿತು ಅಸಮಾಧಾನ ಇದೆ, ಆದರೆ ಭಿನ್ನಮತ ಇಲ್ಲ. ಈ ಮೊದಲೇ ಯಡಿಯೂರಪ್ಪನವರು ತಮಗೆ ಸಹಕಾರ ನೀಡುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರಾಗಿರುವ ನರೇಂದ್ರ ಸ್ವಾಮಿಯವರಿಗೆ ಖಾತೆ ಹಂಚಿಕೆ ಕುರಿತು ಅಸಮಾಧಾನ ತಂದಿದೆ. ಅಲ್ಲದೆ, ಮಂಡ್ಯ ಜಿಲ್ಲೆಯ ಉಸ್ತುವಾರಿ ಸ್ಥಾನದ ಅಕಾಂಕ್ಷಿಯಾಗಿದ್ದರು ಎನ್ನಲಾಗಿದೆ.
|