ಬೆಂಗಳೂರು: ತೈಲ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಜೂನ್ 11ರಂದು ರಾಜ್ಯಾದ್ಯಂತ ರೈಲು ಹಾಗೂ ರಸ್ತೆ ತಡೆ ನಡೆಸಲು ನಿರ್ಧರಿಸಿದೆ.
ಸಿಪಿಐಎಂ, ಸಿಪಿಐ, ಸರ್ವೋದಯ ಕರ್ನಾಟಕ ಪಕ್ಷ, ಕರುನಾಡ ಸೇನೆ ಸೇರಿದಂತೆ ಹಲವು ಸಂಘಟನೆಗಳು ರೈಲು ಹಾಗೂ ರಸ್ತೆ ತಡೆ ನಡೆಸಲು ನೀಡಲಾಗಿದೆ ಎಂದು ಸಿಪಿಐಎಂನ ವಿ.ಜಿ.ಕೆ. ನಾಯರ್ ತಿಳಿಸಿದ್ದಾರೆ.
ಜೂನ್ 11ರಂದು ಬೆಳಿಗ್ಗೆ 11.30ಕ್ಕೆ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ರೈಲು ತಡೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದ ಅವರು, ತೈಲ ಕಂಪೆನಿಗಳ ಪರ ಕೆಲಸ ಮಾಡುವ ಕೇಂದ್ರ ಸರ್ಕಾರ ಜನಸಾಮಾನ್ಯರ ಕಡೆ ಗಮನ ಹರಿಸುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರಿದರು.
ಈ ಮಧ್ಯೆ ಇಂದು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೆಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಅಲ್ಲಲ್ಲಿ ಪ್ರತಿಭಟನೆ
ಮಂಗಳೂರಿನಲ್ಲಿ ಇಂದು ಬಿಜೆಪಿ ನಡೆಸಿದ ವಿನೂತನ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದ ಕಾರ್ಯಕರ್ತರು ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾಂಗ್ರೆಸ್ ನಾಯಕರ ಪ್ರತಿಕೃತಿಯನ್ನು ದಹಿಸಿದರು.
ಹೊಸಪೇಟೆಯಲ್ಲಿ ಡಿವೈಎಫ್ಐ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿದರು. ಎತ್ತಿನ ಬಂಡಿಯಲ್ಲಿ ದ್ವಿಚಕ್ರ ವಾಹನ ಹಾಗೂ ಖಾಲಿ ಸಿಲೆಂಡರ್‌ನೊಂದಿಗೆ ಈಶ್ವರ ನಗರದಿಂದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
|