ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಡಿ.ಎಚ್. ಶಂಕರಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.
ವಿಕಾಸಸೌಧದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈ ನೇಮಕದಿಂದ ತೃಪ್ತಿ ಇದೆ. ಸಂಪುಟ ದರ್ಜೆ ಸ್ಥಾನ ನೀಡಲಾಗಿದ್ದು, ಸಂಪುಟ ಸಭೆಗಳಿಗೂ ನಾನು ಖಾಯಂ ಆಹ್ವಾನಿತ. ಸಚಿವನಾಗಿದ್ದರೆ ಕೇವಲ ಒಂದು ಖಾತೆಗೆ ಮಾತ್ರ ಸೀಮಿತವಾಗಬೇಕಿತ್ತು. ಆದರೆ ಈ ಸ್ಥಾನದಲ್ಲಿ ಎಲ್ಲ ಇಲಾಖೆಗಳಿಗೂ ಮಾರ್ಗದರ್ಶನ ನೀಡುವ ಮಹತ್ವದ ಜವಾಬ್ದಾರಿ ನನಗೆ ದೊರೆತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನತೆಗೆ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುವತ್ತ ನಾವು ತುಂಬಾ ದೂರ ಕ್ರಮಿಸಬೇಕು.ಜನತೆಯ ಶಾಶ್ವತ ಬವಣೆಗಳಾದ ಕುಡಿಯುವ ನೀರು, ರಸ್ತೆ ಹಾಗೂ ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕು. ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿಯೊಂದಿಗೆ ನನಗೆ ಈ ಹುದ್ದೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಸಚಿವ ಸಂಪುಟದಲ್ಲಿ ಶಂಕರಮೂರ್ತಿ ಸಚಿವ ಸ್ಥಾನ ನಿರೀಕ್ಷಿಸಿದ್ದರು. ಆದರೆ ಇವರನ್ನು ಕೈಬಿಟ್ಟಾಗ ತಮ್ಮ ಅಸಮಾಧಾನವನ್ನು ಮುಖ್ಯಮಂತ್ರಿಗಳ ಹಾಗೂ ಹಿರಿಯ ನಾಯಕ ಅನಂತ್ ಕುಮಾರ್ ಬಳಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
|