ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ವಹಿಸಿದ ಕೂಡಲೇ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ ಮಾಡಿದ್ದಾರೆ. ವಿವಿಧ ಇಲಾಖೆಗಳ ಹಾಗೂ 12 ಜಿಲ್ಲೆಗಳ ಅಧಿಕಾರಿಗಳು ಸೇರಿದಂತೆ ಒಟ್ಟು 63 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಇದು ಇತಿಹಾಸದಲ್ಲೇ ಮೇಜರ್ ಸರ್ಜರಿ ಎನ್ನಲಾಗಿದೆ.
ರಾಜ್ಯಪಾಲರ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಾಸ್ವಾಮಿಯವರ ಆಡಳಿತಾವಧಿಯಲ್ಲಿ ಆಯಕಟ್ಟಿನ ಸ್ಥಾನ ಅಲಂಕರಿಸಿದ್ದ ಅನೇಕ ಅಧಿಕಾರಿಗಳ ಸ್ಥಾನ ಸ್ಥಾನ ಪಲ್ಲಟ ಮಾಡಲಾಗಿದೆ. ಕಳೆದ ಬಾರಿ ಮೂಲೆಗುಂಪಾಗಿದ್ದ ಅಧಿಕಾರಿಗಳು ಈ ಬಾರಿ ಉತ್ತಮ ಸ್ಥಾನ ಪಡೆದಿದ್ದಾರೆ.
ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಗೆ ಸುಬೀರ್ ಹರಿಸಿಂಗ್, ಲೋಕೋಪಯೋಗಿ ಇಲಾಖೆಗೆ ಆರ್.ಬಿ.ಅಗವಾನೆ, ಸಾರಿಗೆ ಇಲಾಖೆಗೆ ಉಪೇಂದ್ರ ತ್ರಿಪಾಠಿ, ಇಂಧನ ಇಲಾಖೆಗೆ ಕೆ.ಜಯರಾಜ್, ಅರಣ್ಯ ಇಲಾಖೆಗೆ ಮೀರಾ ಸಕ್ಸೆನಾ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ವಿ. ಉಮೇಶ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕೆ.ಎಚ್.ಗೋಪಾಲಕೃಷ್ಣೇಗೌಡ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಜಮೀರ್ ಪಾಷಾ, ಎನ್. ಶಿವಶೈಲಂ ಅವರನ್ನು ಬೆಂಗಳೂರು ಮೆಟ್ರೋ ವ್ಯವಸ್ಥಾಪಕರನ್ನಾಗಿ ನಿಯೋಜಿಸಲಾಗಿದೆ.
ಮತ್ತಷ್ಟು ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ಧಗೊಂಡಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಹೊರಬೀಳುವ ಸಾಧ್ಯತೆ ಇದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
|