ಹಾವೇರಿ: ಸಮರ್ಪಕ ರಸಗೊಬ್ಬರ ವಿತರಣೆಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ಹೋಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ರೈತನೋರ್ವ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಮೊಟೆಬೆನ್ನೂರಿನಲ್ಲಿ ಮಂಗಳವಾರ ನಡೆದ ಗೋಲಿಬಾರ್‌ನಲ್ಲಿ ಇತರ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ರೈತರು ಕಲ್ಲುತೂರಾಟ ನಡೆಸಿದ್ದಾರೆ. ಈ ಘಟನೆಯನ್ನು ಖಂಡಿಸಿರುವ ರೈತ ಸಂಘ ತುರ್ತು ಸಭೆ ನಡೆಸಲು ತೀರ್ಮಾನಿಸಿದೆ. ಅಲ್ಲದೆ, ಘಟನೆಗೆ ಸರಕಾರವೇ ನೇರ ಹೊಣೆ ಎಂದು ರೈತ ಸಂಘ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಸರಕಾರದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವೆಂದು ದೂರಿದ್ದು ಸರಕಾರ ರೈತರಲ್ಲಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಬಸವರಾಜ್ ಬೊಮ್ಮಾಯಿ, ರಸಗೊಬ್ಬರದ ಬೇಡಿಕೆ ಹೆಚ್ಚಾಗಿರುವುದು ಈ ಘಟನೆ ಕಾರಣವಾಗಿದೆ. ಶಾಂತ ಚಿತ್ತದಿಂದ ಇರಬೇಕೆಂದು ರೈತರಿಗೆ ಮನವಿ ಮಾಡಿದ್ದಾರೆ.
|