ರಾಜ್ಯದಲ್ಲಿ ಎದ್ದಿರುವ ರಸಗೊಬ್ಬರ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಂಜೆ ಪ್ರಧಾನಿಯವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅದಕ್ಕೂ ಮೊದಲು ಇಂದು ಘಟನಾಸ್ಥಳಕ್ಕೆ ಮುಖ್ಯಮಂತ್ರಿಗಳು ಭೇಟಿ ಮಾಡಿ ಪರೀಶೀಲನೆ ನಡೆಸಲಿದ್ದಾರೆ.
ಈ ಮಧ್ಯೆ, ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಅಂತೆಯೇ, ಗಾಯಾಳುಗಳಿಗೆ 50 ಸಾವಿರ ರೂ. ಹಾಗೂ ಘಟನೆಯಲ್ಲಿ ಸಣ್ಣಪುಟ್ಟ ಗಾಯಗೊಂಡವರಿಗೆ 25 ಸಾವಿರ ರೂ. ಪರಿಹಾರ ಧನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜಕೀಯ ದುರುದ್ದೇಶದಿಂದ ಗಲಭೆ ನಡೆಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಲಾಗಿದೆ. ಮುಂಗಾರು ಬಂದ ಎರಡೇ ದಿನಗಳಲ್ಲಿ ರಾಜ್ಯದ ಇತಿಹಾಸದಲ್ಲಿ ಇಂತಹ ಗಲಭೆಗಳು ನಡೆದಿರಲಿಲ್ಲ. ಈ ಬಾರಿಯ ಗಲಭೆಗಳಿಗೆ ರಾಜಕೀಯ ಕುಮ್ಮಕ್ಕು ಇರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಮಂಗಳವಾರ, ಹಾವೇರಿ ಸಮೀಪ ನಡೆದ ರೈತರ ಪ್ರತಿಭಟನೆ ವಿಕೋಪಕ್ಕೆ ಹೋಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ರೈತರೊಬ್ಬರು ಸಾವನ್ನಪ್ಪಿದ್ದರು.
ಮೊಟೆಬೆನ್ನೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಇತರ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ರೈತರು ಕಲ್ಲುತೂರಾಟ ನಡೆಸಿದ್ದಾರೆ. ಈ ಘಟನೆಯನ್ನು ಖಂಡಿಸಿರುವ ರೈತ ಸಂಘ ತುರ್ತು ಸಭೆ ನಡೆಸಲು ತೀರ್ಮಾನಿಸಿದೆ. ಅಲ್ಲದೆ, ಘಟನೆಗೆ ಸರಕಾರವೇ ನೇರ ಹೊಣೆ ಎಂದು ರೈತ ಸಂಘ ತಿಳಿಸಿದೆ.
|