ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಪೂರೈಕೆಗಾಗಿ ನಡೆದ ಪ್ರತಿಭಟನೆ ಬುಧವಾರವೂ ಕೂಡ ತೀವ್ರ ಸ್ವರೂಪ ಪಡೆದಿದ್ದು, ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.
ಹಾವೇರಿಯ ಸಿದ್ದಪ್ಪ ವೃತ್ತದಲ್ಲಿ ನಡೆದ ಗೋಲಿಬಾರ್ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಡೆಗಳಲ್ಲಿಯೂ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಆದರೂ ಪ್ರತಿಭಟನಾಕಾರರು ಹಲವು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಮುಗಿಲು ಮುಟ್ಟಿದ ರೈತರ ಆಕ್ರೋಶದ ಮುಂದೆ ಪೊಲೀಸರು ಮೌನಕ್ಕೆ ಶರಣಾಗಬೇಕಾಯಿತು.
ಈ ಮಧ್ಯೆ ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡ ರೈತ ಸಿದ್ಲಿಂಗಪ್ಪ ಚೂರಿಯ ಅವರ ಶವ ಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ವೀರರೈತನ ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿಯವರು ಆಗಮಿಸಲಿಲ್ಲ ಎಂದು ಸಿಟ್ಟಿಗೆದ್ದಿರುವ ರೈತರು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಹಲವಡೆ ಘರ್ಷಣೆ ರಾಯಚೂರು, ಬ್ಯಾಡಗಿ, ಹುಬ್ಬಳ್ಳಿ, ಧಾರವಾಡ, ಬೀದರ್ ಸೇರಿದಂತೆ ರಾಜ್ಯದ ಹಲವೆಡೆ ರೈತರು ಪ್ರತಿಭಟನೆಗಿಳಿದಿರುವ ವರದಿ ಬಂದಿದ್ದು, ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕನಕಪುರದಲ್ಲಿ ಕರ್ನಾಟಕ ರಕ್ಷಣಾವೇದಿಕೆ ಕಾರ್ಯಕರ್ತರು ರಸ್ತೆತಡೆ ನಡೆಸಿ ಗೋಲಿಬಾರ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಮಧ್ಯೆ ಹಾವೇರಿ ನಗರದಲ್ಲಿ ಅವಿತುಕೊಂಡು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ ಸುಮಾರು 30 ಜನರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
|