ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ವಿಪತ್ತು ನಿರ್ವಹಣಾ ಕುರಿತ ಸುರಕ್ಷಿತ ಜಗತ್ತು 2008 ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ರಾಜ್ಯದ ಮೊದಲ ಅಂತಾರಾಷ್ಟ್ರೀಯ ವಿಪತ್ತು ನಿರ್ವಹಣಾ ವಸ್ತು ಪ್ರದರ್ಶನದಲ್ಲಿ ವಿಪತ್ತು ನಿರ್ವಹಣಾ ಸಮಯದಲ್ಲಿ ಬಳಸುವ ಸಾಮಗ್ರಿ ಹಾಗೂ ಸಲಕರಣೆಗಳನ್ನು ಪ್ರದರ್ಶಿಸಲಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ವಿ.ಎಸ್. ಆಚಾರ್ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಪ್ರದರ್ಶನದಲ್ಲಿ ರಾತ್ರಿ ವೇಳೆ ಪ್ರತಿಫಲಿಸುವ ವಿಶಿಷ್ಟ ಕ್ಯಾಮರಾ ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಲಕರಣೆಗಳು ಪ್ರದರ್ಶಿತಗೊಳ್ಳುತ್ತಿವೆ.
ನವದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕ ದಳದ ನಿರ್ದೇಶನಾಲಯ ಹಾಗೂ ಕರ್ನಾಟಕ ಪೌರರಕ್ಷಣೆ, ಅಗ್ನಿಶಾಮಕ ಹಾಗೂ ತುರ್ತುಸೇವಾ ವಿಭಾಗ ಈ ಪ್ರದರ್ಶನವನ್ನು ಆಯೋಜಿಸಿದೆ. ಇಲ್ಲಿ ಸುನಾಮಿ, ತುಫಾನು ಹಾಗೂ ಉಗ್ರರ ಬೆದರಿಕೆ ಸಮಯದಲ್ಲಿ ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಎಚ್ಎಎಲ್, ಭಾರತೀಯ ಕರಾವಳಿ ಕಾವಲು ಪಡೆಗಳು ಇಲ್ಲಿ ಭಾಗವಹಿಸಿ ಜನತೆಗೆ ಮಾಹಿತಿ ನೀಡುತ್ತಿವೆ. ಇದು ಐದು ದಿನಗಳ ಕಾಲ ನಡೆಯಲಿದೆ.
|