ಉಡುಪಿಯ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ(35) ಕಳೆದ ಮೂರು ದಿನಗಳಿಂದ ಕಾಣೆಯಾಗಿರುವ ವಿಷಯ ತಡವಾಗಿ ಬಹಿರಂಗಗೊಂಡಿದ್ದು, ಪದ್ಮಪ್ರಿಯಾ ಅವರ ಕಾರು ಉಡುಪಿ ನಗರದಿಂದ 15 ಕಿ.ಮೀ ದೂರದ ಕುಂಜಾರುಗಿರಿಯಲ್ಲಿ ಪತ್ತೆಯಾಗಿದೆ.
ಪದ್ಮಪ್ರಿಯಾ ಕಳೆದ ಬುಧವಾರ ಉಡುಪಿ ಕರಂಬಳ್ಳಿ ಮನೆಯಿಂದ ತವರು ಮನೆ ಮೂಲ್ಕಿಯ ಕೊಳ್ನಾಡುವಿಗೆ ಹೋಗುವುದಾಗಿ ತಿಳಿಸಿದ್ದರು. ಶಾಲಾ ದಿನವಾದ್ದರಿಂದ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಆದರೆ ಅವರು ತವರು ಮನೆಗೂ ಹೋಗಿಲ್ಲ ಇತ್ತ ಮನೆಗೂ ಹಿಂತಿರುಗಲಿಲ್ಲ. ಇದರಿಂದ ಸಂಶಯಗೊಂಡ ತಾಯಿ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಪದ್ಮಪ್ರಿಯಾ ಅವರು ಕಾರು ಕುಂಜಾರುಗಿರಿಯಲ್ಲಿ ಅನಾಥವಾಗಿ ನಿಂತಿರುವುದು ಕಂಡುಬಂತು.
ಪೊಲೀಸರು ಕಾರನ್ನು ಪರಿಶಿಲಿಸಿದಾಗ ಕಾರಿನ ಕೀ ಡ್ಯಾಶ್ ಬೋರ್ಡ್ ಮೇಲೆಯೇ ಇತ್ತು. ಡ್ರೈವರ್ ಸೀಟ್ ಕೆಳಗೆ ಒಡೆದ ಬಳೆಗಳ ಚೂರುಗಳು ಪತ್ತೆಯಾಗಿವಿ ಅಲ್ಲದೆ ವ್ಯಾನಿಟಿ ಬ್ಯಾಗ್ ತೆರೆದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ಅದರೊಳಗೆ ನಗದು ಹಾಗೂ ಮಾತ್ರೆಗಳಿದ್ದವು.
ಮೂರು ದಿನಗಳಿಂದ ದೇವಾಲಯವೊಂದರ ಪಕ್ಕ ನಿಂತಿದ್ದ ಈ ಕಾರನ್ನು ಕಂಡ ಸ್ಥಳೀಯರು ಕೆಲ ದಿನಗಳ ಹಿಂದೆ ಅಲ್ಲೆ ಚಿತ್ರೀಕರಣ ನಡೆಸುತ್ತಿದ್ದವರ ಕಾರು ಆಗಿರಬೇಕೆಂದು ಭಾವಿಸಿ ಸುಮ್ಮನಾದರು ಎನ್ನಲಾಗಿದೆ. ಪೊಲೀಸರು ಶ್ವಾನದಳದ ಮೂಲಕ ಕಾರನ್ನು ತಪಾಸಣೆ ನಡೆಸಿದರು.
ಡ್ಯಾಶ್ ಮೇಲೆ ಬಿದ್ದಿದ್ದ ಕೀ ಹಾಗೂ ಬಳೆಗಳ ಚೂರು ಜೊತೆಗೆ ಮೊಬೈಲ್ ಮತ್ತು ಅದರಿಂದ ಹೊರಗೆ ಬಿದ್ದಿರುವ ಸಿಂ ಕಾರ್ಡು ಕಂಡಾಗ ಇದೊಂದು ಬಲತ್ಕಾರದ ಅಪಹರಣ ಎಂದು ಶಂಕಿಸಲಾಗಿದೆ. ರಘುಪತಿ ಭಟ್ ಫೈನಾನ್ಸ್ ಮಾಲೀಕ ಹಾಗೂ ಉದ್ಯಮಿಯಾಗಿದ್ದರಿಂದ ಅಪಹರಣದ ಹಿಂದೆ ಭೂಗತಲೋಕದ ಮಾತುಗಳು ಕೂಡಾ ಕೇಳಿ ಬರುತ್ತಿವೆ. ಒಟ್ಟಾರೆ ಅಪಹರಣದ ಬಗ್ಗೆ ಯಾವುದೇ ಸುಳಿವು ಲಭ್ಯವಾಗದೇ ನಿಗೂಢವಾಗಿ ಉಳಿದಿದೆ.
|