ಇಲ್ಲಿನ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ಸಾವು ನೂರಾರು ಸಂಶಯಗಳಿಗೆ ಎಡೆ ಮಾಡಿ ಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿ ಅತುಲ್ ಸುತ್ತ ಗುಮಾನಿಗಳು ಸುತ್ತುತ್ತಿವೆ.
ಪದ್ಮಪ್ರಿಯಾ ಅತುಲ್ ಅವರ ಬಳಿ ನನಗೆ ಪತಿ ಜೊತೆ ಇರಲು ಸಾಧ್ಯವಿಲ್ಲ. ನನಗಾಗಿ ನೀವು ನೀಡುವ ಹಣವನ್ನು ಕಾಲ್ ಸೆಂಟರ್ ಅಥವಾ ಬಿಪಿಒದಲ್ಲಿ ಕೆಲಸ ಮಾಡಿ ತಿಂಗಳಿಗೆ 10 ಸಾವಿರದಂತೆ ನಿಮ್ಮ ಅಕೌಂಟಿಗೆ ಹಾಕುತ್ತೇನೆ. ಒಂದು ವೇಳೆ ನೀವು ನನಗೆ ಸಹಾಯ ಮಾಡದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಎಂದು ಅತುಲ್ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ಪದ್ಮಪ್ರಿಯಾ ಮನೆ ಬಿಡುವ ಮುನ್ನ ಪತಿಗೆ ಶೀಘ್ರವೇ ವಿಚ್ಚೇದನ ಪತ್ರ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂಬ ಸುದ್ದಿ ಜಿಲ್ಲೆಯ ಸುತ್ತ ಹಬ್ಬಿದೆ. ಪತ್ನಿ ಕಾಣೆಯಾಗಿ ಎರಡು ದಿನ ಕಳೆದರೂ ರಘುಪತಿ ಭಟ್ ಯಾವುದೇ ದೂರು ನೀಡಿರಲಿಲ್ಲ.
ಆರೋಪಿ ಅತುಲ್‌ನ ಉಡುಪಿ ಮನೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ತನಗೂ ಪದ್ಮಪ್ರಿಯಗೂ ಯಾವುದೇ ಸಂಬಂಧವಿರಲಿಲ್ಲ. ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಮುಂದಾಗಿದ್ದೆ ಎಂದು ಅತುಲ್ ಹೇಳಿದ್ದಾನೆ. ಒಟ್ಟಾರೆ ಪದ್ಮಪ್ರಿಯಾ ಸಾವು ನೂರಾರು ಸಂದೇಹಗಳನ್ನು ಸೃಷ್ಟಿಸಿದ್ದು, ಸಾವಿನ ಹಿಂದಿನ ನಿಗೂಢತೆ ಇನ್ನಷ್ಟೇ ಬಯಲಾಗಬೇಕು.
|