ಇಂಗ್ಲಿಷ್ ಪದಪುಂಜಗಳಿಂದ ರಾರಾಜಿಸುತ್ತಿರುವ ಕಡತಗಳನ್ನು ನಿರ್ದಾಕ್ಷಿಣ್ಯವಾಗಿ ಹಿಂದೆ ಕಳುಹಿಸುವಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಚಿವರಿಗೆ ಹೇಳಿದ್ದಾರೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿಬೇಕು ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಈ ನಿಯಮವನ್ನು ಪಾಲಿಸಿದರೆ ಕನ್ನಡ ಭಾಷೆ ಮತ್ತೆ ತನ್ನ ಮಾನ್ಯತೆಯನ್ನು ಪಡೆಯಲಿದೆ. ಕನ್ನಡ ಭಾಷೆಯನ್ನು ಸಚಿವಾಲಯ ಮಟ್ಟದಲ್ಲಿ ಹಾಗೂ ತಳಮಟ್ಟದಲ್ಲಿ ಬಳಸಬೇಕು ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ನಾವು ಎಡವುತ್ತಿದ್ದೇವೆ ಎಂದರು.
ಕನ್ನಡ ಭಾಷೆಯನ್ನು ಆಡಳಿತಾತ್ಮಕ ಭಾಷೆಯನ್ನಾಗಿಸುವಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕೆಂದ ಅವರು, ಸಚಿವರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು ಪ್ರಯತ್ನಿಸಬೇಕೆಂದು ಮನವಿ ಮಾಡಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಕುರಿತು ಜುಲೈವರೆಗೆ ಕಾಯಲಾಗುವುದು. ನಂತರ ನಿಯೋಗವೊಂದು ಪ್ರಧಾನಿಯವರನ್ನು ಭೇಟಿಯಾಗಲಿದೆ ಎಂದು ತಿಳಿಸಿದರು.
|