ಗೋವಿಂದರಾಜನಗರದ ಕಾಂಗ್ರೆಸ್ ಶಾಸಕ ವಿ.ಸೋಮಣ್ಣ ಮತ್ತೆ ತಮ್ಮ ವರಿಷ್ಠರ ಮೇಲೆ ಹರಿಹಾಯ್ದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ, ಪಕ್ಷದ ಉಸ್ತುವಾರಿ ಹೊತ್ತಿದ್ದ ಪೃಥ್ವಿರಾಜ್ ಚವ್ಹಾಣ್ ಹಾಗೂ ದಿಗ್ವಿಜಯ್ ಸಿಂಗ್ ಕಾರಣ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಈ ಹಿಂದೆ ಇದೇ ಆರೋಪವನ್ನು ಸೋಮಣ್ಣ ಮಾಡಿದಾಗ ಪಕ್ಷ ಇವರಿಗೆ ನೋಟಿಸ್ ನೀಡಿತ್ತು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಸೋಮಣ್ಣ ಈ ಬಾರಿ ಬಹಿರಂಗ ವೇದಿಕೆಯಲ್ಲಿ ಈ ಮಾತನ್ನು ಪುನರುಚ್ಛರಿಸಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಕ್ಷದ ಚುನಾವಣಾ ಉಸ್ತುವಾರಿ ಹೊತ್ತಿದ್ದ ಪೃಥ್ವಿರಾಜ್ ಚವ್ಹಾಣ್ ಹಾಗೂ ದಿಗ್ವಿಜಯ್ ಸಿಂಗ್ ಕೈಗೊಂಡ ತಪ್ಪು ನಿರ್ಧಾರ ಹಾಗೂ ಮತದಾರರಿಗೆ ರವಾನಿಸಿದ ತಪ್ಪು ಸಂದೇಶಗಳು ಪಕ್ಷದ ಸೋಲಿಗೆ ಕಾರಣ ಎಂದಿದ್ದಾರೆ.
ಪಕ್ಷ ಉಳಿಸಲು ಹೈಕಮಾಂಡ್ ಮುಂದಾಗಬೇಕೆಂದ ಅವರು, ತಾನು ಎಐಸಿಸಿ ಅಧ್ಯಕ್ಷೆ ಸೋನಿಯಾಗೆ ಈ ಕುರಿತು ಪತ್ರ ಬರೆಯುವುದಾಗಿ ಗುಡುಗಿದ್ದಾರೆ. ರಾಷ್ಟ್ರಪತಿ ಆಡಳಿತ ಅವಧಿಯಲ್ಲಾದ ರಾಜ್ಯಪಾಲರ ನಿರ್ಲಕ್ಷ್ಯವೇ ರಸಗೊಬ್ಬರ ವ್ಯತ್ಯಯಕ್ಕೆ ಕಾರಣ ಎಂದ ಅವರು ಇದು ಯಡಿಯೂರಪ್ಪ ಸರ್ಕಾರದ ತಪ್ಪಲ್ಲ ಎಂದು ಬಿಜೆಪಿಯನ್ನು ಸಮರ್ಥಿಸಿದರು.
|