ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಾಗಿ ಸಲ್ಲಿಸಲಾಗಿರುವ ನಾಮಪತ್ರ ಪರೀಶೀಲನೆ ಕಾರ್ಯ ಮಂಗಳವಾರ ನಡೆದಿದ್ದು, ರಾಜ್ಯಸಭೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಆಂಧ್ರ ಮೂಲದ ಡಾ. ಪದ್ಮರಾಜನ್, ಟಿ.ಡಿ. ಆರ್ ಹರಿಶ್ಚಂದ್ರಗೌಡ ಅವರ ನಾಮಪತ್ರದಲ್ಲಿ ಸೂಚಕರ ಸಹಿ ಇಲ್ಲದ ಕಾರಣ ಈ ಎರಡೂ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಅಂತೆಯೇ, ವಿಧಾನಪರಿಷತ್‌ಗೆ ಬಿಜೆಪಿಯಿಂದ ಐದನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುಧಾಕರ್, ತಿಪ್ಪಣ್ಣ ಅವರ ನಾಮಪತ್ರಗಳೂ ತಿರಸ್ಕೃತಗೊಂಡಿವೆ. ಉಳಿದಂತೆ ಇತರ ನಾಮಪತ್ರಗಳು ಸಿಂಧುವಾಗಿದ್ದು, ಅವಿರೋಧ ಆಯ್ಕೆ ಖಚಿತವಾಗಿದೆ.
ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿರುವ ಮಾಜಿ ರಾಜ್ಯಪಾಲರಾದ ಎಸ್.ಎಂ.ಕೃಷ್ಣ, ರಾಮಾಜೋಯಿಸ್, ಗೃಹಸಚಿವ ವಿ.ಎಸ್. ಆಚಾರ್ಯ, ಕೇಂದ್ರ ಸಚಿವ ಎಂ.ಸಿ. ನಾಣಯ್ಯ ಮೊದಲಾದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಿರುವ ಎಲ್ಲಾ ಅಧಿಕೃತ ಅಭ್ಯರ್ಥಿಗಳ ಆಯ್ಕೆ ಹಾದಿ ಸುಗಮವಾದಂತಾಗಿದೆ.
ಈ ಮಧ್ಯೆ ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಎಂ.ಸಿ. ನಾಣಯ್ಯ ನಾಮಪತ್ರದ ಜತೆಯಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದ ಕ್ರಮ ಬದ್ದತೆ ಕುರಿತು ಬಿಜೆಪಿ ತಕರಾರು ತೆಗೆದಿದೆ. ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ ಸಲ್ಲಿಸಿಲ್ಲ. ಈ ನಿಟ್ಟಿನಲ್ಲಿ ಅವರ ನಾಮಪತ್ರವನ್ನು ಹಿಂದಕ್ಕೆ ಪಡೆಯಬೇಕೆಂದು ಚುನಾವಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
|