ಬೆಂಗಳೂರು: ಹಾವೇರಿಯಲ್ಲಿನ ಗೋಲಿಬಾರ್ ಘಟನೆಯಲ್ಲಿ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಸಂಜಯಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುತ್ತಿರುವ ರೈತ ಪುಟ್ಟಪ್ಪ ಹೊನ್ನತ್ತಿ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಭೇಟಿ ಮಾಡಿದರು.
ನಗರದ ಸಂಜಯ ಗಾಂಧಿ ಆಸ್ಪತ್ರೆಗೆ ಧಾವಿಸಿದ ಅವರು ರೈತನನ್ನು ಭೇಟಿ ಮಾಡಿ ಸಾಂತ್ವನಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ದುಡಿಯುವ ರೈತನೊಬ್ಬ ಆಸ್ಪತ್ರೆಯಲ್ಲಿರುವುದರಿಂದ ಕುಟುಂಬದ ನಿರ್ವಹಣೆ ಎಷ್ಟು ಕಷ್ಟವಿದೆ ಎಂಬ ಅರಿವು ತಮಗಿದೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಪುಟ್ಟಪ್ಪ ಹೊನ್ನತ್ತಿ ರೈತರ ಮೂವರು ಮಕ್ಕಳ ಹೆಸರಿನಲ್ಲಿ ತಲಾ 1 ಲಕ್ಷ ರೂ. ಠೇವಣಿ ಇಡಲಾಗುವುದು. ಈ ಹಣ ಅವರ ವಿದ್ಯಾಭ್ಯಾಸಕ್ಕೆ ಉಪಯೋಗವಾಗಲಿದೆ. ಅಂತೆಯೇ ರೈತನ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ಸರಕಾರವೇ ವಹಿಸಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾವೇರಿಯ ಗೋಲಿಬಾರ್ ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
|