ಮುಂದಿನ ತಿಂಗಳ 17ರಂದು 2008-09ನೇ ಸಾಲಿನ ಪೂರಕ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿರುವ ಎರಡು ಬಜೆಟ್‌ಗಳು ಜನರಿಗೆ ಉಪಯೋಗವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಪ್ರಣಾಳಿಕೆ ಅಂಶಗಳು ಸೇರಿಕೊಂಡಿರುತ್ತವೆ ಎಂದು ತಿಳಿಸಿದರು.
ಬಜೆಟ್‌ನಲ್ಲಿ ರೈತರು, ಕೂಲಿಕಾರ್ಮಿಕರಿಗೆ ಪೂರಕವಾಗುವ ಅಂಶಗಳು ಒಳಗೊಂಡಿರುತ್ತದೆ. ಬಡತನ ರೇಖೆಯ ಗರಿಷ್ಠ ಮಿತಿಯನ್ನು 12 ಸಾವಿರದಿಂದ 30 ಸಾವಿರಕ್ಕೆ ಏರಿಸುವ ಮಹತ್ತರ ಅಂಶ ಕೂಡ ಬಜೆಟ್‌ನಲ್ಲಿ ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.
ಹೊರರಾಜ್ಯಗಳೊಂದಿಗೆ ಎದ್ದಿರುವ ನೀರಾವರಿ ಸಮಸ್ಯೆಗಳ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವ ಮೂಲಕ ಚರ್ಚೆ ನಡೆಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಗಳ ನಡುವೆ ದ್ವೇಷ ಬೇಕಾಗಿಲ್ಲ. ನಾವು ಈ ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ಅವರು ತಿಳಿಸಿದರು.
|