ಶಿಕಾರಿಪುರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸೋಲನ್ನು ಅನುಭವಿಸಿದ ಬಳಿಕ ಶನಿವಾರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ರಸಗೊಬ್ಬರದ ಅಭಾವಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರಿಗೆ ದ್ರೋಹವೆಸಗುತ್ತಿದ್ದಾರೆ. ರೈತರ ಆತ್ಮಹತ್ಯೆ ಬಳಿಕ ಪರಿಹಾರ ನೀಡುವುದು ಅನಗತ್ಯ ಎಂದು ದೂರಿದ ಅವರು, ಅದರ ಬದಲಾಗಿ ರೈತರ ಸಮಸ್ಯೆಗಳಿಗೆ ಸೂಕ್ತ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಶಿಕಾರಿಪುರದಲ್ಲಿ ಜನರ ತೀರ್ಪಿಗೆ ತಲೆ ಬಾಗುತ್ತೇನೆ. ಆದರೆ ಬಿಜೆಪಿ ಚುನಾವಣೆಗಾಗಿ 500 ಕೋಟಿ ರೂ. ಖರ್ಚು ಮಾಡಿದೆ. ಶಿಕಾರಿಪುರ ಕ್ಷೇತ್ರವೊಂದರಲ್ಲೇ ಸುಮಾರು 50 ಕೋಟಿ ರೂ. ಖರ್ಚು ಮಾಡಿದ್ದೇ ನನ್ನ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾರೆ.
|