ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳಲ್ಲಿ ಜೆಡಿಎಸ್ ಕಾಂಗ್ರೆಸ್ ನಡೆಸಿರುವ ಮೈತ್ರಿ ಮುಂದುವರೆದಿದ್ದು, ವಿಧಾನಪರಿಷತ್ ಸಭಾಪತಿ ಹಾಗೂ ಉಪಸಭಾಪತಿ ಆಯ್ಕೆಯಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ.
ವಿಧಾನಪರಿಷತ್ತಿನ ಹಾಲಿ ಸಭಾಪತಿ ಬಿ.ಕೆ. ಚಂದ್ರಶೇಖರ್ ಹಾಗೂ ಉಪಸಭಾಪತಿ ಸಚ್ಚಿದಾನಂದ ಖೋತ ಅವರ ಸದಸ್ಯತ್ವ ಅವಧಿ ಈ ತಿಂಗಳ 30ರಂದು ಅಂತ್ಯಗೊಳ್ಳಲಿದೆ. ಹಾಗಾಗಿ ಈ ಎರಡು ಸ್ಥಾನಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಹಂಚಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಜೆಡಿಎಸ್‌ಗೆ ಉಪಸಭಾಪತಿ ಸ್ಥಾನವನ್ನು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಹಿರಿಯ ನಾಯಕ ಎಂ.ವಿ. ರಾಜಶೇಖರನ್ ಕಾಂಗ್ರೆಸ್‌ನಿಂದ ಸಭಾಪತಿ ಸ್ಥಾನದ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಇದಕ್ಕೆ ಜೆಡಿಎಸ್ ಕೂಡ ಸಮ್ಮತಿಸಿದೆ. ಉಪಸಭಾಪತಿ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕುರಿತಾದ ಅಂತಿಮ ತೀರ್ಮಾನ ಸೋಮವಾರ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ.
|