ಸೋಮವಾರದಿಂದ ವಿಧಾನಮಂಡಲದ ಮಹತ್ವದ ಅಧಿವೇಶನ ಪ್ರಾರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರ ಸ್ವೀಕರಿಸಿದ ದಿನದಿಂದ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಕಳೆದ ತಿಂಗಳ 30ರಂದು ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರೈತರ ಬದುಕು ಹಸನಾಗುವುದೆಂಬ ನೀರೀಕ್ಷೆ ಸುಳ್ಳಾಯಿತು.
ರಾಜ್ಯದೆಲ್ಲೆಡೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕಾಗಿ ರೈತರ ಪ್ರತಿಭಟನೆ ಮುಗಿಲುಮುಟ್ಟಿತು. ಗೊಬ್ಬರಕ್ಕಾಗಿ ರೈತರು ಆತ್ಮಹತ್ಯೆಗೆ ಶರಣಾದರು. ಹೀಗೆ ಅನೇಕ ಸಮಸ್ಯೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಬಿಜೆಪಿಗೆ ಅವುಗಳಿಗೆಲ್ಲಾ ಉತ್ತರ ಹೇಳಬೇಕಿದೆ.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಸಲುವಾಗಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರದ ಮೇಲೆ ದಾಳಿಗೆ ಪ್ರತಿಪಕ್ಷಗಳು ಹತ್ತು ಹಲವು ವಿಷಯಗಳು ಸಿದ್ದಪಡಿಸಿದೆ. ಈ ಮಧ್ಯೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಲ್ಲಿ ತುಸು ಇಳಿಕೆ ಕಂಡಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
|