ಸಿಖ್ ಸಮುದಾಯದ ಪ್ರತಿಭಟನೆಯ ನಡುವೆಯೂ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಬಿಗಿ ಬಂದೋಬಸ್ತ್ ಮೂಲಕ ನಗರಕ್ಕೆ ಆಗಮಿಸಿ ಒಂದು ದಿನ ವಾಸ್ತವ್ಯ ಹೂಡಿದ್ದಾರೆ.
ಇಲ್ಲಿನ ಸಿದ್ದಲಿಂಗಪುರದ ಸ್ಥಳೀಯ ಶಾಖೆಗೆ ಆಗಮಿಸಿದ ರಾಮ್ ರಹೀಮ್ ಸಿಂಗ್, ಇಡೀ ದಿನ ಧ್ಯಾನಸ್ಥರಾಗಿ ಕಳೆದರು. ಸುಮಾರು 12 ವಾಹನಗಳಲ್ಲಿ ಖಾಸಗಿ ರಕ್ಷಣಾ ಸಿಬ್ಬಂದಿ ಹಾಗೂ 50ಕ್ಕೂ ಹೆಚ್ಚು ಎಂಜಿನಿಯರ್ ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಅವರ ಅನುಯಾಯಿಗಳು ಗುರುವಿನ ಜೊತೆಯಲ್ಲಿ ಧ್ಯಾನದಲ್ಲಿ ತೊಡಗಿದ್ದರು.
ಇತ್ತೀಚೆಗಷ್ಟೆ ಮುಂಬೈನಲ್ಲಿ ರಾಮ್ ರಹೀಮ್ ಸಿಂಗ್ ವಿರುದ್ಧ ಉಗ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಖೆಯ ಸುತ್ತಲೂ ಸುಮಾರು 2.5 ಎಕರೆ ಪ್ರದೇಶದವರೆಗೆ ಜೆಡ್ ಶ್ರೇಣಿಯ ರಕ್ಷಣೆ ನೀಡಲಾಗಿತ್ತು.
ಬೆಂಗಳೂರಿನಲ್ಲಿ ಪ್ರತಿಭಟನೆ ರಾಜ್ಯಕ್ಕೆ ರಾಮ್ ರಹೀಮ್ ಸಿಂಗ್ ಆಗಮಿಸಿರುವುದನ್ನು ವಿರೋಧಿಸಿ ನೂರಾರು ಸಿಖ್ ಅನುಯಾಯಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಇತ್ತೀಚೆಗಷ್ಟೇ ರಾಮ್ ರಹೀಮ್ ಮುಂಬೈಗೆ ಆಗಮಿಸಿದಾಗ ಅವರ ಅಂಗರಕ್ಷನೊಬ್ಬ ಹಾರಿಸಿದ ಗುಂಡಿಗೆ ಸಿಖ್ ಯುವಕನೊಬ್ಬ ಬಲಿಯಾಗಿದ್ದ. ಇದರಿಂದ ಉದ್ರೇಕಗೊಂಡ ಸಿಖ್ ಸಮುದಾಯ ದೇಶಾದ್ಯಂತ ಪ್ರತಿಭಟನೆಗೆ ಇಳಿದಿದ್ದರು.
|