ಬೆಂಗಳೂರು: ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಪಕ್ಷದಲ್ಲಿ ಎದ್ದಿರುವ ಆಂತರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಖರ್ಗೆಯವರನ್ನು ಕಣಕ್ಕಿಳಿಸಲು ಹೈಕಮಾಂಡ್ ಚಿಂತನೆ ನಡೆಸಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಖರ್ಗೆಯವರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಿರುವ ಬಗ್ಗೆ ಕಾಂಗ್ರೆಸ್ ಮಾಜಿ ಸಚಿವರು ಹಾಗೂ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖರ್ಗೆ ನೇತೃತ್ವದಲ್ಲಿಯೇ ಕಾಂಗ್ರೆಸ್ ಸೋಲು ಕಂಡಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗುಲ್ಬರ್ಗಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಯೋಚಿಸಿದೆ.
ಖರ್ಗೆ ಪಟ್ಟ ಸಿದ್ದರಾಮಯ್ಯರಿಗೆ? ಈ ಮಧ್ಯೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಉನ್ನತ ಸ್ಥಾನದ ಆಕಾಂಕ್ಷಿಯಾಗಿರುವ ಸಿದ್ದರಾಮಯ್ಯನವರ ಅಸಮಾಧಾನವನ್ನು ಹೋಗಲಾಡಿಸುವುದು ಹೈಕಮಾಂಡ್ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಪ್ರತಿಪಕ್ಷದ ನಾಯಕ ಸ್ಥಾನವನ್ನು ಸಿದ್ದರಾಮಯ್ಯನವರಿಗೆ ನೀಡುವ ಕುರಿತು ಕಾಂಗ್ರೆಸ್ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
|