ವಿಧಾನಸಭೆಯ ನಾಲ್ಕು ದಿನಗಳ ಅಧಿವೇಶನ ಬುಧವಾರವೇ ಮುಕ್ತಾಯಗೊಳ್ಳಲಿದ್ದು, ನಿಗದಿಗಿಂತ ಒಂದು ದಿನ ಮೊದಲೇ ಕಲಾಪ ಕೊನೆಗೊಳ್ಳಲಿದೆ.
ಮಂಗಳವಾರ ನಡೆದ ಕಲಾಪ ಸಂದರ್ಭದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮೊದಲು ನಿಗದಿ ಮಾಡಿದಂತೆ ಗುರುವಾರ ಅಧಿವೇಶನ ಇರುವುದಿಲ್ಲ ಎಂದು ಸಭಾಧ್ಯಕ್ಷ ಜಗದೀಶ್ ತಿಳಿಸಿದ್ದಾರೆ.
ಅಲ್ಲದೆ, ರಾಜ್ಯಸಭೆ ಹಾಗೂ ವಿಧಾನಪರಿಷತ್‌ಗೆ ಚುನಾವಣೆ ಇಲ್ಲದ ಹಿನ್ನೆಲೆಯಲ್ಲಿ ಗುರುವಾರ ನಡೆಸಲು ತಿರ್ಮಾನಿಸಿದ್ದ ಅಧಿವೇಶನವನ್ನು ರದ್ದು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇಂದು ಕೊನೆ ದಿನವಾಗಿದ್ದರಿಂದ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಅಂಗೀಕರಿಸಲಾಗುವುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಕಾಲ ನಡೆದ ಕಲಾಪದಲ್ಲಿ ರಸಗೊಬ್ಬರ ಸಮಸ್ಯೆ ಕುರಿತು ಚರ್ಚೆ ನಡೆಸಲಾಗಿತ್ತು. ಅಧಿವೇಶನದ ಕೊನೆ ದಿನವಾಗಿದ್ದರಿಂದ ಇಂದು ಪದ್ಮಪ್ರಿಯಾ ಸಾವಿನ ಪ್ರಕರಣದ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ, ಹಾವೇರಿಯಲ್ಲಿ ರೈತರ ಮೇಲೆ ನಡೆದಿರುವ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ ರಚನೆಗೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಿದೆ.
|