ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿ ಹಾಗೂ ಮಾವನ ಮನೆಯವರ ಮೇಲೆ ಗುಂಡು ಹಾರಿಸಿದ್ದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್‌ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅನಿಲ್ ಕುಮಾರ್ ಪತ್ನಿ ಹಾಗೂ ಮಾವ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಾಣ ಬೆದರಿಕೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಜೆ.ಪಿ. ನಗರದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಬಂಧಿಸಿದ್ದಾರೆ.
ವಿವಾಹ ಸಂದರ್ಭದಲ್ಲಿ ಅನಿಲ್ ಕುಮಾರ್‌ಗೆ ಭಾರಿ ಪ್ರಮಾಣದ ವರದಕ್ಷಿಣೆ ಕೊಡಲಾಗಿತ್ತು. ಆದರೆ ಮದುವೆಯ ಬಳಿಕವೂ ವರದಕ್ಷಿಣೆಗಾಗಿ ಹೆಂಡತಿಯ ಮೇಲೆ ಆತ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ನಾಲ್ಕು ದಿನಗಳ ಹಿಂದೆ ಆಕೆ ತವರು ಮನೆಗೆ ಹೋಗಿದ್ದಳು.
ಇದರಿಂದ ಕುಪಿತಗೊಂಡಿದ್ದ ಅನಿಲ್ ಕುಮಾರ್ ಭಾನುವಾರ ರಾತ್ರಿ ಜೆ.ಪಿ. ನಗರದಲ್ಲಿರುವ ಪತ್ನಿ ಮನೆಗೆ ಆಗಮಿಸಿ ಪತ್ನಿಯೊಂದಿಗೆ ಜಗಳಕ್ಕಿಳಿದ. ಈ ಸಂದರ್ಭದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಆತ ಸರ್ವೀಸ್ ರಿವಾಲ್ವರ್‌ನಿಂದ ಮೂರು ಸುತ್ತು ಗುಂಡು ಹಾರಿಸಿ ಮನೆಯಲ್ಲಿದವರ ಕೊಲೆಗೆ ಯತ್ನಿಸಿದ್ದನು. ಆದರೆ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಆದರೆ ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
|