ರಾಜ್ಯ ವಿಧಾನಸಭಾ ಅಧಿವೇಶನ ಬುಧವಾರ ಕೊನೆಗೊಂಡಿದ್ದು, ಅಧಿವೇಶನವನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡಲಾಗಿದೆ.
ಹಾವೇರಿ ಗೋಲಿಬಾರ್ ಪ್ರಕರಣದ ಕುರಿತು ತನಿಖೆಗೆ ಜಂಟಿ ಸದನ ಸಮಿತಿ ರಚಿಸಲು ಕಾಂಗ್ರೆಸ್ ಪಟ್ಟುಹಿಡಿದಿತ್ತು. ಕೊನೆಗೆ ಪ್ರತಿಪಕ್ಷಗಳ ಧರಣಿಯಲ್ಲಿಯೇ ಕಲಾಪ ಅಂತ್ಯಗೊಂಡಿತು. ಸದನ ಪ್ರಾರಂಭವಾಗುತ್ತಿದ್ದಂತೆ ಗೋಲಿಬಾರ್ ಪ್ರಕರಣವನ್ನು ಕೈಗೆತ್ತಿಕೊಂಡ ಪ್ರತಿಪಕ್ಷಗಳು ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ಪ್ರಾರಂಭಿಸಿವು.
"ರಸಗೊಬ್ಬರ ಕೊರತೆ ರೈತರ ಆತ್ಮಹತ್ಯೆಗಳ ವಿಚಾರಗಳ ಸತ್ಯಾಂಶ ಹೊರಬರಲು ಸರ್ಕಾರ ಜಂಟಿ ಸದನ ಸಮಿತಿ ರಚಿಸಬೇಕು. ಆತ್ಮಹತ್ಯೆ ಕುರಿತು ಕೃಷಿ ಸಚಿವರು ನೀಡಿರುವ ಅವಹೇಳನಕಾರಿಗೆ ರೈತರಲ್ಲಿ ಕ್ಷಮೆ ಯಾಚಿಸಬೇಕು" ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ಸದನದಲ್ಲಿ ರಸಗೊಬ್ಬರದ ಅಬ್ಬರ ಮುಗಿಲು ಮುಟ್ಟಿದ್ದರಿಂದ ಕೆಲಕಾಲ ಸದನವನ್ನು ಮುಂದೂಡಲಾಯಿತು. ಬಳಿಕ ಮತ್ತೆ ಆರಂಭಗೊಂಡಾಗ ರಸಗೊಬ್ಬರ ಸಮಸ್ಯೆ ಕುರಿತು ಕಾಂಗ್ರೆಸ್ ಧರಣಿಗೆ ಜೆಡಿಎಸ್ ಕೈ ಜೋಡಿಸಿತು.
ಆದರೆ ಕಾಂಗ್ರೆಸ್-ಜೆಡಿಎಸ್ ಆಗ್ರಹವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಸರ್ಕಾರ, ಹಾವೇರಿಯಲ್ಲಿ ಗೋಲಿಬಾರ್ ಪ್ರಕರಣದ ಕುರಿತು ಈಗಾಗಲೇ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿತು.
|