ಗುರುವಾರ ರಾಜ್ಯದಲ್ಲಿ ಮತ್ತೊಂದು ಮಿನಿ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದ್ದು, ಸ್ಥಾನ ಗೆಲ್ಲಲು ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ.
ವಿಧಾನಪರಿಷತ್ನ ಆಗ್ನೇಯ, ಈಶಾನ್ಯ, ಪಶ್ಚಿಮ, ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಉಡುಪಿ ಮಂಗಳೂರು ಸ್ಥಳೀಯ ಸಂಸ್ಥೆ ಸೇರಿದಂತೆ ಒಟ್ಟು ಐದು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದೆ.
ಆಡಳಿತಾರೂಢ ಬಿಜೆಪಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದ್ದು, ಐದು ಸ್ಥಾನಗಳನ್ನು ಗೆಲ್ಲುವ ಪಣ ತೊಟ್ಟಿದೆ. ಈ ಮಧ್ಯೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಎಂ. ನೀಲಯ್ಯ, ಜೆಡಿಎಸ್‌ನಿಂದ ಪುಟ್ಟಣ್ಣಯ್ಯ, ಕಾಂಗ್ರೆಸ್‌ನ ರಾಘವೇಂದ್ರ ಹಾಗೂ ಪಕ್ಷೇತರರಾಗಿ ಮಾಜಿ ಶಾಸಕ ವಾಟಾಳ್ ನಾಗರಾಜ್ ಕಣದಲ್ಲಿದ್ದಾರೆ. ಬಿಜೆಪಿ ಭದ್ರಕೋಟೆಯಾಗಿರುವ ಈ ಕ್ಷೇತ್ರ ಕಳೆದ ಬಾರಿ ಜೆಡಿಎಸ್ ಪಾಲಾಗಿತ್ತು. ಈಗ ಅದೇ ಪುನರಾವರ್ತನೆಯಲ್ಲಿರುವ ಜೆಡಿಎಸ್‌ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿದೆ.
ಅಂತೆಯೇ 31 ವಿಧಾನಸಭಾ ಕ್ಷೇತ್ರ ಹಾಗೂ 5 ಲೋಕಸಭಾ ಕ್ಷೇತ್ರಗಳನ್ನೊಳಗೊಂಡಿರುವ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನೇರ ಹಣಾಹಣಿ ಕಂಡು ಬಂದಿದೆ. ಜೆಡಿಎಸ್‌ನಿಂದ ಶಿವಶಂಕರ್, ಬಿಜೆಪಿಯಿಂದ ಡಾ. ಎ.ಎಚ್. ಶಿವಯೋಗಿಸ್ವಾಮಿ, ಕಾಂಗ್ರೆಸ್‌ನಿಂದ ನಿಂದಲೋಕೇಶ್ವರಪ್ಪ, ಪಕ್ಷತರರಾಗಿ ಚೌಡ ರೆಡ್ಡಿ ಕಣದಲ್ಲಿದ್ದಾರೆ.
ಸ್ಥಳೀಯಾಡಳಿತ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡರ ತವರು ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಬಿಜೆಪಿಯಿಂದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ನಿಂದ ನಿತ್ಯಾನಂದ ಮಂಡೋಡಿ ಸ್ಪರ್ಧಾ ಕಣದಲ್ಲಿದ್ದಾರೆ.
ವಿಧಾನಸಭೆಯಲ್ಲಿ ಸೋಲನ್ನು ಅನುಭವಿಸಿದ ಬಳಿಕ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಈಗ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪಶ್ಚಿಮ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಹಾಗೆಯೇ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಶಶಿಲ್ ನಮೋಶಿ ಸ್ಪರ್ಧಿಸುತ್ತಿದ್ದಾರೆ.
|