ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯುತ್ತಿದ್ದು, ಮುಂಜಾನೆಯಿಂದ ಮತದಾನ ಬಿರುಸಿನಿಂದ ಸಾಗಿದೆ. ಹುಬ್ಬಳ್ಳಿ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಹನ್ನೊಂದು ಗಂಟೆಯ ವೇಳೆಗೆ ಶೇ. 25ರಷ್ಟು ಮತದಾನವಾಗಿರುವ ವರದಿ ಬಂದಿದೆ.
ಪಜ್ಞಾವಂತರ ಕ್ಷೇತ್ರ ಎಂದೇ ಹೆಸರುವಾಸಿಯಾಗಿರುವ ಈ ಕ್ಷೇತ್ರದಲ್ಲಿ ಹುಬ್ಬಳ್ಳಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳು ಒಳಗೊಂಡಿವೆ. ನಕಲಿ ಮತದಾನ ತಡೆಗೆ ಕಠಿಣ ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆ ಬಿಗಿ ಬಂದೋ ಬಸ್ತ್ ಏರ್ಪಡಿಸಿದೆ.
ಈ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಕಣದಲ್ಲಿದ್ದಾರೆ ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಮೋಹನ್ ಲಿಂಬಿಕಾಯಿ ಪ್ರಬಲ ಪೈಪೋಟಿ ನೀಡಿದ್ದಾರೆ. ವಿಧಾನಪರಿಷತ್ ಮೂಲಕ ವಿಧಾನಸೌಧದ ಮೆಟ್ಟಿಲು ಹತ್ತಿದ್ದ ಪಾಟೀಲರಿಗೆ ಈ ಬಾರಿಯ ಚುನಾವಣೆ ಕಬ್ಬಿಣದ ಕಡಲೆಯಾಗಿದೆ.
ಗದಗ್ ವರದಿ: ಗದಗ್‌ನಲ್ಲಿ ಮತದಾನದ ವೇಳೆ ನಕಲಿ ಮತದಾನಕ್ಕೆ ಯತ್ನ ನಡೆದಿದ್ದು, ಈ ಘಟನೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ವಾಕ್ಸಮರ ನಡೆದಿದೆ.
ನಕಲಿ ಮತದಾನಕ್ಕೆ ಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
|