ವಿಧಾನಪರಿಷತ್ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿರುವ ಘಟನೆ ನಗರದ ಕೆ.ಇ. ಬೋರ್ಡ್‌ನಲ್ಲಿ ನಡೆದಿದೆ.
ಗುರುವಾರ ಮತದಾನದ ವೇಳೆ 5-6 ಜನರಿದ್ದ ಗುಂಪೊಂದು ಏಕಾಏಕಿ ಚುನಾವಣಾ ಕೇಂದ್ರಕ್ಕೆ ನುಗ್ಗಿ ಮತದಾನಕ್ಕೆ ಪ್ರಯತ್ನಿಸಿತು. ಇದನ್ನು ಅರಿತ ಬಿಜೆಪಿ ಕಾರ್ಯಕರ್ತರು ಅವರನ್ನು ಬಂಧಿಸುವಂತೆ ಪೊಲೀಸರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ತನಿಖೆ ನಡೆಸಿದ ಪೊಲೀಸರು ನಕಲಿ ಮತದಾರರು ಎಂದು ತಿಳಿದು ಬಂಧಿಸಲು ಹೋದಾಗ ಇಬ್ಬರಷ್ಟೇ ಪೊಲೀಸರ ಕೈಗೆ ಸಿಕ್ಕರು. ಉಳಿದವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ.
ಈ ಘಟನೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ. ನಕಲಿ ಮತದಾನಕ್ಕೆ ಯತ್ನ ನಡೆಸಿರುವ ಮತದಾರರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ವಿಫಲರಾದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿತು.
|