ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಸಜ್ಜುಗೊಂಡಿದ್ದು, ಈಗಾಗಲೇ ಆರು ಜನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗಿದೆ ಎಂದು ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಪೂರ್ವ ತಯಾರಿ ಕುರಿತು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಸಗೊಬ್ಬರದ ಕುರಿತು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಕ್ಕೆ ಸಮರ್ಪಕವಾಗಿ ಗೊಬ್ಬರ ಪೂರೈಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಅಲ್ಲದೆ, ರಸಗೊಬ್ಬರ ಬೆಲೆ ಹಾಗೂ ಸಾಗಾಟ ನೀತಿಯನ್ನು ಘೋಷಿಸದಿರುವ ಕೇಂದ್ರ ಸರಕಾರವೇ ಈ ಬಿಕ್ಕಟ್ಟಿಗೆ ನೇರ ಹೊಣೆ ಎಂದು ಆರೋಪಿಸಿದರು.
ಆದರೆ, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಧರಣಿ ನಡೆಸಿದರೆ ದೆಹಲಿಯಲ್ಲಿ ಬಿಜೆಪಿ ಧರಣಿ ನಡೆಸಬೇಕಾಗುತ್ತದೆ. ರಸಗೊಬ್ಬರ ವಿಚಾರದಲ್ಲಿ ರಾಜ್ಯ ಸರಕಾರವನ್ನು ದೂರುವುದು ಬಾಲಿಶತನ ಎಂದು ಅವರು ನುಡಿದರು.
|