ಕಣ್ಣೆದುರು ಆತ್ಮಹತ್ಯೆ ಮಾಡಿಕೊಂಡ ಅಪ್ಪಅಮ್ಮನ ಸಾವಿನಿಂದ ಕಂಗೆಟ್ಟು ಆಘಾತಗೊಂಡಿದ್ದ ಬಾಲೆ ಮೋನಿಷಾ, ಆಘಾತದಿಂದ ಚೇತರಿಸಿಕೊಂಡಿದ್ದರೂ ಇದೀಗ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾಳೆ.
ಕಳೆದ ಡಿಸೆಂಬರ್ 25ರಂದು ವಿಜಯನಗರದ ಮೂಡಲಪಾಳ್ಯದ ನಿವಾಸಿ ನಾಗೇಶ ಹಾಗೂ ಆತನ ಪತ್ನಿ ಮಗಳು ಮೊನಿಷಾಳಿಗೆ ನೇಣು ಬಿಗಿದು ತಾವು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಅದೃಷ್ಟವಶಾತ್ ಬದುಕುಳಿದ ಬಾಲೆ ಮೊನಿಷಾ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು.
ಈ ಹಿನ್ನೆಲೆಯಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೊನಿಷಾಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಚೇತರಿಸಿಕೊಂಡಿದ್ದಳು. ಆದರೆ ಬೆಂಬಿಡಡ ಮೃತ್ಯು ಡೆಂಗ್ಯೂ ಜ್ವರದ ರೂಪದಲ್ಲಿ ಕಾಡಿದ್ದು, ಬಿಳಿ ರಕ್ತಕಣದ ಕೊರತೆಯಿಂದ ಆಕೆ ಮೃತಪಟ್ಟಿದ್ದಾಳೆ.
ಎರಡು ಜೀವಗಳನ್ನು ಏಕಕಾಲಕ್ಕೆ ಕಳೆದುಕೊಂಡಿದ್ದರೂ ಮಗು ಮೋನಿಷಾ ಬದುಕುಳಿದ ಕಾರಣ ಅಲ್ಪಸ್ವಲ್ಪ ಉತ್ಸಾಹಗೊಂಡಿದ್ದ ಆಕೆಯ ಅಜ್ಜಿ, ತಾತ ಕುಗ್ಗಿ ಹೋಗಿದ್ದಾರೆ. ಮೃತ ಬಾಲಕಿಯ ದೇಹವನ್ನು ಸ್ವಗ್ರಾಮ ಕೋಲಾರಕ್ಕೆ ಕೊಂಡೊಯ್ಯಲಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಗೋಲ್ಡನ್ ಸ್ಟಾರ್ ಗಣೇಶ್‌ನನ್ನು ನೋಡಬೇಕೆಂಬ ಮೊನಿಷಾ ಬಯಕೆಗೆ ಸ್ಪಂದಿಸಿದ್ದ ಗಣೇಶ್ ಆಕೆಯನ್ನು ಭೇಟಿ ಮಾಡಿ ಜೀವಿಸುವ ಆಸೆ ಹುಟ್ಟಿಸಿದ್ದ.
ಇದರಿಂದ ಸ್ವಲ್ಪ ಗೆಲುವಾಗಿದ್ದ ಮೊನಿಷಾಳಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ತೀವ್ರ ಅಸ್ವಸ್ಥಗೊಂಡ ಮೊನಿಷಾಳನ್ನು ಮೃತ್ಯು ಕೊನೆಗೂ ಬಿಡಲಿಲ್ಲ.
|