ಅನಿವಾರ್ಯವಾದರೆ ಯಾವುದೇ ಪಕ್ಷವನ್ನು ಒಡೆಯಲು ಸಿದ್ದ ಎಂಬ ಇಂಧನ ಸಚಿವ ಕೆ.ಎಸ್. ಈಶ್ವರಪ್ಪನವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸಚಿವರ ಹೇಳಿಕೆಯನ್ನು ರಾಜಕೀಯ ದೃಷ್ಟಿಯಿಂದ ಗಮನಿಸಿದರೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಿಂಗಳು ತುಂಬುವ ಮೊದಲೇ ಅಭದ್ರತೆ ಕಾಡತೊಡಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನ ಮುಗಿದ ತಕ್ಷಣವೇ ಪಕ್ಷೇತರರು ಒಟ್ಟಿಗೆ ಸೇರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಬಗ್ಗೆ ಬಿಜೆಪಿ ಆತಂಕಗೊಂಡಿರುವುದಂತೂ ನಿಜ. ಇದಕ್ಕೆ ಈಶ್ವರಪ್ಪನವರ ಹೇಳಿಕೆಯೇ ಪ್ರಮುಖ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸರ್ಕಾರದ ಸ್ಥಿರತೆ ಕುರಿತಂತೆ ಏನೋ ನಡೆದಿದೆ ಎಂಬುದು ಈಶ್ವರಪ್ಪ ಮಾತಿನಿಂದ ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿಗಳ ಅನುಮೋದನೆ ಇಲ್ಲದೆ ಅಂಥ ಹೇಳಿಕೆಯನ್ನು ಈಶ್ವರಪ್ಪ ನೀಡುತ್ತಿರಲಿಲ್ಲ ಎಂದು ಅವರು ತಿಳಿಸಿದರು.
|