ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಹಾಗೂ ಪಕ್ಷೇತರರ ಬೆಂಬಲಿಗರೊಂದಿಗೆ ಘರ್ಷಣೆ ಸಂಭವಿಸಿದೆ.
ಮತ ಎಣಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ಏಜೆಂಟರ ಮೇಲೆ ಪಕ್ಷೇತರ ಕಾರ್ಯಕರ್ತರು ಹಲ್ಲೆ ನಡೆಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬಂತು. ಬಳಿಕ ಪೊಲೀಸರು ನಡುವೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ಈ ಘಟನೆಯಿಂದ ಕೆಲವರು ಗಾಯಗೊಂಡಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ತೀವ್ರ ನಿರಾಸೆಯಾಗಿದೆ. ಎರಡನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿಯ ಮೋಹನ್ ಲಿಂಬೇಕಾಯಿ 2 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್.ಕೆ. ಪಾಟೀಲ್, ಪ್ರಜ್ಞಾವಂತ ಮತದಾರರು ನೀಡಿರುವ ನಿರ್ಣಯಕ್ಕೆ ಬದ್ದವಾಗಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಡೆದಿರುವಂತೆ ಈ ಬಾರಿಯೂ ಕಂಡುಬಂದಿರುವುದು ತೀವ್ರ ನಿರಾಸೆ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಶಿವಯೋಗಿಸ್ವಾಮಿ 3,084 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
2ಸಾವಿರ ಅಸಿಂಧು ಮತಗಳು! ಪ್ರಜ್ಞಾವಂತರ ಚುನಾವಣೆ ಎಂದೇ ಗುರುತಿಸಿಕೊಂಡಿರುವ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಒಂದೇ ಕ್ಷೇತ್ರದಲ್ಲಿ ಸುಮಾರು 2ಸಾವಿರ ಅಸಿಂಧು ಮತಗಳು ಕಾಣಿಸಿಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
|