ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಅಖಿಲ ಭಾರತ ಲಾರಿ ಮಾಲೀಕರ ಒಕ್ಕೂಟವು(ಎಐಎಂಟಿಸಿ) ಮುಂದಿನ ತಿಂಗಳು ಎರಡರಿಂದ ದೇಶಾದ್ಯಂತ ನಡೆಸಲು ಉದ್ದೇಶಿಸಿರುವ ಮುಷ್ಕರದಿಂದ ಹಿಂದೆ ಸರಿಯಲು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಒಕ್ಕೂಟ ನಿರ್ಧರಿಸಿದೆ.
ಡೀಸೆಲ್ ದರ ಇಳಿಸುವುದು, ಪೆಟ್ರೋಲ್ ತೆರಿಗೆ ರದ್ದುಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಎಂಟಿಸಿ ಮುಷ್ಕರಕ್ಕೆ ಕರೆ ನೀಡಲು ಯೋಜಿಸಿತ್ತು.. ಆದರೆ ಈ ಮುಷ್ಕರದಿಂದಾಗಿ ರಾಜ್ಯ ಟ್ರಕ್ ಮಾಲೀಕರಿಗೆ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಮುಷ್ಕರದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಒಕ್ಕೂಟ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ, ಟ್ರಕ್ ಮಾಲೀಕರ ಕೆಲವೊಂದು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಪರಿಹರಿಸಿದೆ. ಅಲ್ಲದೆ, ಅನೇಕ ಬಾರಿ ಎಐಎಂಟಿಸಿ ನಡೆಸಿದ ಮುಷ್ಕರದಿಂದ ಯಾವುದೇ ಬೇಡಿಕೆಗಳು ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರದಲ್ಲಿ ಭಾಗವಹಿಸದಿರಲು ಒಕ್ಕೂಟ ನಿರ್ಧರಿಸಿದೆ ಎಂದು ತಿಳಿಸಿದರು.
|