ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಎಫ್‌ಸಿಸಿ) ನೂತನ ಅಧ್ಯಕ್ಷರಾಗಿ ನಟಿ, ನಿರ್ಮಾಪಕಿ ಜಯಮಾಲಾ ಆಯ್ಕೆಯಾಗಿದ್ದಾರೆ. ಈ ಮೂಲಕ ಕೆಎಎಫ್‌ಸಿಸಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯೊಬ್ಬಳು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಂತಾಗಿದೆ.
ಜಯಮಾಲಾ ತಮ್ಮ ಪ್ರತಿಸ್ಪರ್ಧಿ ನಿರ್ಮಾಪಕ ಬಾಮಾ ಹರೀಶ್ ಅವರನ್ನು 584 ಮತಗಳ ಅಂತರದಿಂದ ಸೋಲಿಸಿದರು. ಜಯಮಾಲಾ ಅವರಿಗೆ 867 ಮತಗಳು ಬಂದಿದ್ದರೆ, ಬಾಮಾ ಹರೀಶ್ ಅವರಿಗೆ 243 ಮತಗಳು ದೊರೆತಿದ್ದವು.
ಉಳಿದಂತೆ ಮಂಡಳಿಯ ಉಪಾಧ್ಯಕ್ಷರಾಗಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಪ್ರದರ್ಶಕರ ವಲಯದಿಂದ ಮಾರ್ಸ್ ಸುರೇಶ್ ಚುನಾಯಿತರಾಗಿದ್ದಾರೆ. ನಿರ್ಮಾಪಕ ವಲಯದಿಂದ ಕಾರ್ಯದರ್ಶಿಯಾಗಿ ಕೆ.ಸಿ.ಎನ್. ಕುಮಾರ್, ವಿತರಕರ ವಲಯದಿಂದ ವಿಜಯಕುಮಾರ್, ಪ್ರದರ್ಶಕರ ವಲಯದಿಂದ ಥಾಮಸ್ ಡಿಸೋಜಾ ಆಯ್ಕೆಯಾಗಿದ್ದಾರೆ. ಖಜಾಂಚಿ ಸ್ಥಾನ ನಿರ್ಮಾಪಕ ಸಾ.ರಾ. ಗೋವಿಂದು ಅವರ ಪಾಲಾಗಿದೆ.
ಗೆಲುವಿನ ಬಳಿಕ ಮಾತನಾಡಿದ ಜಯಮಾಲಾ, ಪೈರಸಿ ನಿಯಂತ್ರಣಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವುದು ತಮ್ಮ ಮೊದಲ ಆದ್ಯತೆ ಎಂದು ತಿಳಿಸಿದರು. ಅಲ್ಲದೆ, ಕನ್ನಡ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ಕೊಡಿಸುವುದೂ ಸೇರಿದಂತೆ ಕನ್ನಡ ಚಿತ್ರರಂಗದ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
|