ಕರಾವಳಿಯಲ್ಲಿ ತಾಂಡವವಾಡುತ್ತಿರುವ ಚಿಕುನ್‌ಗುನ್ಯಾ ಜ್ವರ ಬಾಧೆ ಈಗ ರಾಜ್ಯ ಬಂದರು ಮತ್ತು ಮೀನುಗಾರಿಕೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರಿಗೂ ತಟ್ಟಿದೆ.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಚಿಕೂನ್ ಗುನ್ಯಾ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಸಂತೈಸಿದ ಪಾಲೇಮಾರ್ ಈಗ ಜ್ವರದಿಂದ ಬಳಲುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಚಿಕುನ್‌ಗುನ್ಯಾ ರೋಗದ ಲಕ್ಷಣಗಳು ಕಂಡು ಬಂದಿವೆ.
ಈ ಹಿನ್ನೆಲೆಯಲ್ಲಿ ವೈದ್ಯರು 15 ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ ದಕ್ಷಿಣ ಕನ್ನಡದಲ್ಲಿ ವ್ಯಾಪಿಸಿರುವ ಈ ಕಾಯಿಲೆಗೆ ಸಾವಿರಾರು ಮಂದಿ ತುತ್ತಾಗಿದ್ದಾರೆ. ಈ ರೋಗಕ್ಕೆ ಮತ್ತಿಬ್ಬರು ಬಲಿಯಾಗುವ ಮೂಲಕ ಚಿಕುನ್‌ಗುನ್ಯಾ ಬಾಧೆಗೆ ಬಲಿಯಾದವ ಸಂಖ್ಯೆ 33ಕ್ಕೆ ಏರಿದೆ. ಪಡವನ್ನೂರು ಗ್ರಾಮದ ಫಾತಿಮಾ ಹಾಗೂ ದೊಲ್ಪಾಡಿಯ ಕಮಲ ಎಂಬುವವರು ಚಿಕುನ್‌ಗುನ್ಯಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ವ್ಯಾಪಕವಾಗಿ ಹರಡಿರುವ ಚಿಕುನ್‌ಗುನ್ಯಾ ಕಾಯಿಲೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ಆರು ಮಂದಿ ವೈದ್ಯರ ತಂಡವೊಂದನ್ನು ರಚಿಸಲಾಗಿದೆ.
|