ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟನೆಗೊಂಡ ಬಳಿಕ ಮೊದಲ ಬಾರಿಗೆ ಖಾಸಗಿ ಸಮಾರಂಭದಲ್ಲಿ ಕಾಣಿಸಿಕೊಂಡ ಪಿ.ಜಿ.ಆರ್. ಸಿಂಧ್ಯಾ, ಇದೊಂದು ಸ್ವಯಂಕೃತ ಅಪರಾಧ ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ.
ಅವಸರದ ನಿರ್ಧಾರದಿಂದಾಗಿ ಜನತಾ ಪರಿವಾರದಿಂದ ಹೊರನಡೆದೆ. ಇದೇ ನನಗೆ ಮುಳುವಾಗಿದೆ. ಆದರೆ ಮತ್ತೆ ಜನತಾ ಪರಿವಾರದ ಬಾಗಿಲಿಗೆ ಹೋಗಲಾರೆ ಎಂದು ಅವರು ತಿಳಿಸಿದ್ದಾರೆ.
ಬಿಎಸ್‌ಪಿಗೆ ಸೇರಿದ್ದು ಯಾವುದೇ ಸ್ಥಾನಮಾನಕ್ಕಾಗಿ ಅಲ್ಲ. ಆದರೆ, ಯಾವುದೇ ಮಾಹಿತಿ ನೀಡದೆ, ನೋಟಿಸ್ ಕೂಡ ಜಾರಿ ಮಾಡದೆ ಬಿಎಸ್‌ಪಿಯಿಂದ ಉಚ್ಛಾಟನೆಗೊಳಿಸಿದ್ದು, ಅಚ್ಚರಿ ತಂದಿದೆ. ನಾಲ್ಕು ದಿನದಿಂದ ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.
ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವುದೇ ರಾಜಕೀಯ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ. ಪಕ್ಷಕ್ಕೆ ಬಂದರೆ ಸ್ವಾಗತವಿದೆ ಎಂದು ತಿಳಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಾರಿಯಾಗಿದ್ದೇನೆ. ಮುಂದಿನ ರಾಜಕೀಯ ಭವಿಷ್ಯದ ಕುರಿತು ಶೀಘ್ರದಲ್ಲಿಯೇ ತಿಳಿಸುವುದಾಗಿ ಅವರು ತಿಳಿಸಿದರು.
|