ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂಬ ಬಿಜೆಪಿ ಪ್ರಣಾಳಿಕೆ ಈಗ ಬದಲಾಗಿದೆ. ರೈತರಿಗೆ ಉಚಿತ ವಿದ್ಯುತ್ ಬದಲು ಗ್ರಾಮೀಣ ಪ್ರದೇಶಕ್ಕೆ ತಡೆರಹಿತ ವಿದ್ಯುತ್ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದ್ದು, ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಕ್ಕೆ 18ಗಂಟೆಗಳ ಕಾಲ ತಡೆರಹಿತ ವಿದ್ಯುತ್ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಇದರಿಂದ ರೈತರಿಗೆ ಶುಲ್ಕವನ್ನು ಪಾವತಿಸುವ ಶಕ್ತಿ ಬರುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಸಂಕಷ್ಟದಲ್ಲಿರುವ ಒಣಭೂಮಿ ಕೃಷಿಕರಿಗೆ ತಾತ್ಕಾಲಿಕವಾಗಿ ಉಚಿತ ವಿದ್ಯುತ್ ನೀಡುವ ಉದ್ದೇಶವಿದ್ದು, ಪೂರ್ವ ತಯಾರಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರೈತರಿಗೆ ತಡೆರಹಿತ ವಿದ್ಯುತ್ ನೀಡುವ ಸಲುವಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಪ್ರಮಾಣವನ್ನು ಐದು ಸಾವಿರ ಮೆ.ವ್ಯಾಟ್‌ನಿಂದ ಈ ಬಾರಿ 10 ಸಾವಿರ ಮೆ.ವ್ಯಾಟ್‌ಗೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ 500 ಮೆ.ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ಶೀಘ್ರವೇ ಸ್ಥಾಪನೆಗೊಳ್ಳಲಿದೆ ಎಂದು ಅವರು ತಿಳಿಸಿದರು.
|