ವಿಧಾನಪರಿಷತ್ತಿನ ಸಭಾಪತಿ ಪ್ರೊ|ಬಿ.ಕೆ. ಚಂದ್ರಶೇಖರ್ ಅವರ ಅವಧಿ ಸೋಮವಾರ ಕೊನೆಗೊಂಡಿದ್ದು, ಇವರ ಸ್ಥಾನಕ್ಕೆ ಹಂಗಾಮಿ ಸಭಾಪತಿಯಾಗಿ ಜೆಡಿಎಸ್‌ನ ಎನ್. ತಿಪ್ಪಣ್ಣ ಆಯ್ಕೆಯಾಗಿದ್ದಾರೆ.
ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದ್ದು, ಮಂಗಳವಾರ ತಿಪ್ಪಣ್ಣನವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂದಿನ ತಿಂಗಳು 17ರಿಂದ ಬಜೆಟ್ ಅಧಿವೇಶನ ಆರಂಭವಾಗಲಿರುವುದರಿಂದ ಆ ಸಂದರ್ಭದಲ್ಲಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಈ ಮಧ್ಯೆ ಕಾಂಗ್ರೆಸ್‌ನಲ್ಲಿ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕಾಗಿ ಮುಖಂಡರು ತೀವ್ರ ಪೈಪೋಟಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ರಾಜ್ಯ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚೌಹಾಣ್ ಆಗಮಿಸಲಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಈ ಬಗ್ಗೆ ಜೆಡಿಎಸ್ ಜೊತೆ ಮೈತ್ರಿ ನಡೆಸುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಭಾಪತಿ ಸ್ಥಾನದಿಂದ ನಿವೃತ್ತಿಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ. ಬಿ.ಕೆ. ಚಂದ್ರಶೇಖರ್, ಸಭಾಪತಿ ಸ್ಥಾನದಲ್ಲಿದ್ದು, ಸಕ್ರಿಯವಾಗಿ ಕಾರ್ಯ ನಿರ್ವಹಿಸಿರುವ ತೃಪ್ತಿ ತಮಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ ಕಾಂಗ್ರೆಸ್ಸಿನ ಅಶೋಕ್ ಕಟ್ಟಿಮನಿ, ಸಲೀಂ ಅಹ್ಮದ್, ಸಚ್ಚಿದಾನಂದ ಖೋತ್ ಹಾಗೂ ಡಿ. ಮಾದೇಗೌಡ, ರತ್ನಾ ವಿ. ಕುಸನೂರು ಹಾಗೂ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಕೆ. ಪಾಟೀಲ್, ಹಾಗೂ ಎಚ್.ಎಸ್. ಶಿವಶಂಕರ್ ಅವರ ಅವಧಿ ಸೋಮವಾರಕ್ಕೆ ಮುಕ್ತಾಯಗೊಂಡಿದೆ.
|