ಪೊಲೀಸ್ ಮಹಾನಿರ್ದೇಶಕರಾಗಿ ಆರ್. ಶ್ರೀಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು ಸುರಕ್ಷಿತ-ಸುಭ್ರದ್ರ ಕರ್ನಾಟಕ ನಮ್ಮ ಧ್ಯೇಯ ಎಂದರು.
ರಾಜ್ಯ ಪೊಲೀಸರು ದಕ್ಷತೆಗೆ ಹೆಸರಾಗಿದ್ದಾರೆ. ಇಲಾಖೆಯನ್ನು ಉತ್ತುಂಗಕ್ಕೇರಿಸಿ ಅದರ ಕೀರ್ತಿಯನ್ನು ಹೆಚ್ಚಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆಯ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜನರ ಬೇಡಿಕೆಗೆ ತಕ್ಕಂತೆ ಕಾರ್ಯನಿರ್ವಹಿಸಿ ಶಾಂತಿ-ಸುವ್ಯವಸ್ಥೆ ಕಾಪಾಡಲು ತಳಮಟ್ಟದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಸಿಬ್ಬಂದಿ ಹಾಗೂ ಮೂಲಸೌಕರ್ಯ ವ್ಯವಸ್ಥೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಇದ್ದ ಸಿಬ್ಬಂದಿಗಳಿಗೆ ತರಬೇತಿ ನೀಡಿ ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿ ನುಡಿದ ಶ್ರೀಕುಮಾರ್, ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದರು.
ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನೊಳಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿದೆ. ಅದನ್ನು ಮೀರಿ ಹಿಂಸಾಚಾರಕ್ಕೆ ಅವಕಾಶ ನೀಡಲಾಗದು ಎಂದು ಶ್ರೀ ಕುಮಾರ್ ನುಡಿದರು.
|