ಬೆಂಗಳೂರು: ನಿಗದಿತ ಅವಧಿಯೊಳಗೆ ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ಲೋಕಾಯುಕ್ತರಿಂದ ನೋಟಿಸ್ ಜಾರಿಯಾಗಿದೆ. ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್ ಅವರಿಗೂ ನೋಟಿಸ್ ಜಾರಿಮಾಡಿದ್ದು, ಆ.30ರೊಳಗೆ ಆಸ್ತಿ ವಿವರ ಸಲ್ಲಿಸಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ತಾಕೀತು ಮಾಡಿದ್ದಾರೆ.
ಜನಪ್ರತಿನಿಧಿಗಳು ತಾವೇ ಮಾಡಿದ ಕಾನೂನಿಗೆ ಗೌರವ ತೋರದಿರುವುದು ನಾಚಿಕೆಗೇಡಿನ ವಿಷಯ ಎಂದು ಹೆಗಡೆ ಕಿಡಿಕಾರಿದ್ದಾರೆ.
ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್. ಶಾಸಕ ದಿನೇಶ್ ಗುಂಡೂರಾವ್, ಮಾಜಿ ಕೇಂದ್ರ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಎಂಟು ಮಂದಿ ವಿಧಾನಪರಿಷತ್ ಸದಸ್ಯರೂ ಆಸ್ತಿ ವಿವರ ಸಲ್ಲಿಸದಿರುವವರ ಪಟ್ಟಿಯಲ್ಲಿ ಸೇರಿದ್ದಾರೆ.
ಕಳೆದ ವಿಧಾನಮಂಡಲದಲ್ಲಿ ಶಾಸಕರಾಗಿದ್ದು ಪ್ರಸಕ್ತ ಚುನಾವಣೆಯಲ್ಲಿ ಸೋತಿರುವವರೂ ಕೂಡ ಆಸ್ತಿವಿವರ ಸಲ್ಲಿಸಬೇಕೆಂದು ಆದೇಶಿಸಲಾಗಿದೆ. ಮಾಜಿಮುಖ್ಯಮಂತ್ರಿ ಧರ್ಮಸಿಂಗ್, ಮಾಜಿ ಸಚಿವರುಗಳಾದ ಆರ್.ವಿ.ದೇಶಪಾಂಡೆ, ಚೆನ್ನಿಗಪ್ಪ ಮತ್ತು ಚಲುವರಾಯಸ್ವಾಮಿ ಅವರೂ ಪಟ್ಟಿಯಲ್ಲಿ ಸೇರಿದ್ದು ಈ ಬಾರಿಯ ಚುನಾವಣೆಯಲ್ಲಿ ಇವರೆಲ್ಲ ಸೋತಿದ್ದಾರೆ.
|