ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕೂನ್‌ಗುನ್ಯಾ ರೋಗದಿಂದ ಸುಮಾರು 3 ಲಕ್ಷ ಮಂದಿ ಬಳಲುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದರೆ.
ನಗರದಲ್ಲಿ ಅಧಿಕಾರಿಗಳ ಜೊತೆ ಜಿಲ್ಲೆಯಲ್ಲಿ ವ್ಯಾಪಿಸಿರುವ ಚಿಕೂನ್‌ಗುನ್ಯ ಕಾಯಿಲೆಯ ಕುರಿತು ನಡೆಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ತಲುಪಲು ಸರ್ಕಾರಿ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವೈದ್ಯ ಕಾಲೇಜುಗಳು ಒಂದೊಂದು ತಾಲೂಕು ನಿರ್ವಹಿಸಿ ನೆರವಾಗಿವೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯಾದ್ಯಂತ ಹಬ್ಬಿರುವ ಚಿಕೂನ್‌ಗುನ್ಯಾ ಈಗ ಶಿವಮೊಗ್ಗ, ಕಾಸರಗೋಡು, ಕೊಡಗು ಜಿಲ್ಲೆ ಸೇರಿದಂತೆ ಹಲವು ಕಡೆಗಳಿಗೆ ವ್ಯಾಪಿಸಿದೆ. ಈ ನಿಟ್ಟಿನಲ್ಲಿ ಚಿಕೂನ್‌ಗುನ್ಯಾ ತಡೆಗೆ ಸರ್ಕಾರ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ವರದಿ: ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಚಿಕೂನ್‌ಗುನ್ಯಾ ಹಾಗೂ ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿರುವ ಡೆಂಗ್ಯೂಜ್ವರ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ನಗರಪಾಲಿಕೆ, ಗ್ರಾಮ ಪಂಚಾಯಿತಿಗಳು ಚಿಕೂನ್‌ಗುನ್ಯಾ ಹಾಗೂ ಡೆಂಗ್ಯೂ ಜ್ವರ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದ್ದು, ಸ್ವಚ್ಛತೆ ಹಾಗೂ ಔಷಧಿ ಪೂರೈಕೆಗೆ ವಿಶೇಷ ಒತ್ತು ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
|