ಅಮರನಾಥ ದೇವಸ್ಥಾನ ಮಂಡಳಿಗೆ ನೀಡಿದ್ದ ಜಮೀನನ್ನು ಹಿಂದಕ್ಕೆ ಪಡೆದಿರುವ ಜಮ್ಮು ಕಾಶ್ಮೀರ ಸರ್ಕಾರದ ಕ್ರಮವನ್ನು ಖಂಡಿಸಿ, ಹಿಂದೂ ಪರ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್‌ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳೂರು, ಉಡುಪಿ, ದಾವಣಗೆರೆ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕೆಲ ಕಡೆಗಳಲ್ಲಿ ಖಾಸಗಿ ಬಸ್‌ಗಳು ಬೀದಿಗಿಳಿದಿವೆ.
ಅಲ್ಲದೆ, ಕೆಲವೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಸ್ವಯಂ ಘೋಷಿತ ಬಂದ್‌ಗೆ ಬೆಂಬಲ ನೀಡಿದೆ. ವಾಹನಗಳು ರಸ್ತೆಗಿಳಿಯದೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹುಬ್ಬಳ್ಳಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ರಸ್ತೆಯುದ್ದಕ್ಕೂ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವುದರಿಂದ ಎಲ್ಲಾ ಕಡೆಗಳಲ್ಲೂ ಬಿಗಿ ಬಂದೋ ಬಸ್ತ್ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಹಿಂದೂ ಸಂಘಟನೆಗಳು ನೀಡಿರುವ ಬಂದ್ ರಾಜ್ಯ ಬಿಜೆಪಿ ಘಟಕ ಬೆಂಬಲ ಸೂಚಿಸಿದೆ.
ನೀರಸ ಪ್ರತಿಕ್ರಿಯೆ ಬೆಂಗಳೂರು, ತುಮಕೂರು, ಕೊಪ್ಪಳ, ಮುಖ್ಯಮಂತ್ರಿ ತವರೂರಾದ ಶಿವಮೊಗ್ಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ಎಂದಿನಂತೆ ವಾಹನಗಳು ಸಂಚರಿಸುತ್ತಿದ್ದು, ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟಾಗಿಲ್ಲ. ಅಲ್ಲದೆ, ಶಾಲಾ ಕಾಲೇಜುಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿಯೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
|