ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್.ಕೆ. ಪಾಟೀಲ್ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡರಲ್ಲೂ ಸೋಲುಂಡ ಬಳಿಕ ಎಚ್.ಕೆ. ಪಾಟೀಲ್ ಅವರಿಗೆ ಕಾಂಗ್ರೆಸ್‌ನಲ್ಲಿ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಇದೇ ಸಂದರ್ಭದಲ್ಲಿ ಜೆಡಿಎಸ್ ಜೊತೆ ಮಾತುಕತೆಗೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ವಿಧಾನಪರಿಷತ್ ಚುನಾವಣೆಯಲ್ಲಿ ದೇವೇಗೌಡರು ತಮಗೆ ಬೆಂಬಲ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಭೇಟಿ ಮಾಡಿದ್ದೆ. ಅಲ್ಲದೆ, ಪ್ರಸ್ತುತ ರಾಜಕೀಯದ ಕುರಿತು ಸಮಾಲೋಚನೆ ನಡೆಸಿದ್ದೇನೆ. ಈ ಭೇಟಿಗೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದ್ದಾರೆ.
ಆದರೆ ಕೆಲವು ಮೂಲಗಳ ಪ್ರಕಾರ, ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವ ತಮ್ಮನ್ನು ಪಕ್ಷದಲ್ಲಿ ಕಡೆಗೆಣಿಸಲಾಗುತ್ತಿದೆ ಎಂದು ಪಾಟೀಲರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಟೀಲ್ ಅವರ ಮುಂದಿನ ರಾಜಕೀಯ ಭವಿಷ್ಯದ ಕುರಿತು ಶೀಘ್ರವೇ ನಿರ್ಧಾರ ಹೊರಬೀಳುವ ಸಾಧ್ಯತೆಗಳಿವೆ.
|