ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಹೈಕೋರ್ಟ್ ಮೂರು ತಿಂಗಳ ಗಡುವು ನೀಡಿರುವ ಬೆನ್ನಲ್ಲೆ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ಪ್ರಾರಂಭಗೊಂಡಿದೆ.
ಈಗಾಗಲೇ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಜಯಭೇರಿ ಬಾರಿಸಿ ಬೀಗುತ್ತಿರುವ ಬಿಜೆಪಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಮೂರರಲ್ಲಿ ಎರಡು ಪಾಲನ್ನು ಪಡೆಯುವ ಹುಮ್ಮಸ್ಸಿನಲ್ಲಿ ಬಿಜೆಪಿ ಚುನಾವಣೆಗೆ ಇಳಿದಿದೆ. ಒಟ್ಟು 145 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿ ಚುನಾವಣೆಯಲ್ಲಿ ಸಾಕಷ್ಟು ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್‌ನ ಭದ್ರಕೋಟೆಯನ್ನು ಮತ್ತಷ್ಟು ಧೂಳಿಪಟ ಮಾಡುವ ಸನ್ನಾಹದಲ್ಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿ ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿದ ಬಳಿಕ ಚುನಾವಣೆ ಕುರಿತು ಚಿಂತನೆ ನಡೆಸಲಾಗುವುದು ಎಂದು ಈಗಾಗಲೇ ನಗರಾಭಿವೃದ್ದಿ ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಈ ಮಧ್ಯೆ ಇತ್ತೀಚೆಗೆ ನಡೆದ ವಿಧಾನಪರಿಷತ್‌ನಲ್ಲಿ ಒಂದೂ ಸ್ಥಾನವನ್ನು ಗಳಿಸಲಾಗದ ಕಾಂಗ್ರೆಸ್ ಬಿಬಿಎಂಪಿ ಚುನಾವಣೆ ಮೂಲಕವಾದರೂ ಪ್ರತಿಷ್ಠೆಯನ್ನು ಉಳಿಸುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಕಾರ್ಯತಂತ್ರ ರೂಪಿಸಲು ವೇದಿಕೆ ಸಜ್ಜುಗೊಂಡಿದೆ. ಈ ನಿಟ್ಟಿನಲ್ಲಿ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಚುನಾವಣೆ ಎದುರಿಸಲು ಸಿದ್ದಗೊಂಡಿದೆ.
ಇದೇ ವೇಳೆ ಜೆಡಿಎಸ್ ಕೂಡ ಸುಮ್ಮನೆ ಕೈಕಟ್ಟಿ ಕೂತಿಲ್ಲ. ನಾಳೆಯಿಂದಲೇ ಪಾಲಿಕೆ ಚುನಾವಣೆ ಕುರಿತು ಸಭೆ ನಡೆಸಲು ತೀರ್ಮಾನಿಸಿದೆ. ಪಕ್ಷದ ವರಿಷ್ಠರು, ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
|